ವಯಸ್ಸಾಗುವುದಕ್ಕೂ ಕರುಳಿನ ಆರೋಗ್ಯಕ್ಕೂ ಏನು ಸಂಬಂಧ? ಈ 7 ವಿಚಾರಗಳು ಗೊತ್ತಿರಲಿ | Gut health

ಕರುಳಿನ ಸೂಕ್ಷ್ಮಜೀವಿಗಳು ಜೀರ್ಣಕ್ರಿಯೆ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿ, ಉರಿಯೂತ ಹಾಗೂ ಮೆದುಳಿನ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಆರೋಗ್ಯಕರ ವಯಸ್ಸಾಗುವಿಕೆಯಲ್ಲಿ ಕರುಳಿನ ಪಾತ್ರದ 7 ಪ್ರಮುಖ ಅಂಶಗಳು ಇಲ್ಲಿವೆ.
Gut Microbiome
ವಯಸ್ಸಾಗುವಿಕೆಗೂ ಕರುಳಿನ ಆರೋಗ್ಯಕ್ಕೂ ಏನು ಸಂಬಂಧ?
Published on: 

Digestion: ವಯಸ್ಸಾಗುವಿಕೆಗೂ ಕರುಳಿನ ಆರೋಗ್ಯಕ್ಕೂ ಏನ್ ಸಂಬಂಧ? ಹೌದು.. ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ಸುಕ್ಕು, ಸ್ನಾಯುಗಳ ಬಲ ಕಡಿಮೆಯಾಗುವುದು, ಚಲನೆ ನಿಧಾನವಾಗುವುದು, ಸುಸ್ತು ಹೆಚ್ಚಾಗುವುದು ಸಹಜ. ಆದರೆ ಇವೆಲ್ಲದರ ಜೊತೆಗೆ ಕರುಳಿನ ಆರೋಗ್ಯಕ್ಕೂ ವಯಸ್ಸಾಗುವಿಕೆಗೂ ಸಂಬಂಧ ಇದೆಯಾ? ಎಂಬುದರ ಬಗ್ಗೆ ವಿಜ್ಞಾನಿಗಳು ಈಗ ಹೆಚ್ಚು ಗಮನ ಹರಿಸುತ್ತಿದ್ದಾರೆ.

ನಮ್ಮ ಕರುಳಿನಲ್ಲಿ ಕೋಟ್ಯಂತರ ಸೂಕ್ಷ್ಮಜೀವಿಗಳಿರುತ್ತವೆ. ಇವು ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ದೇಹದ ರೋಗನಿರೋಧಕ ಶಕ್ತಿ ಸೇರಿದಂತೆ ಹಲವು ಕಾರ್ಯಗಳಲ್ಲಿ ಸಹಾಯ ಮಾಡುತ್ತವೆ. ವೈದ್ಯರೊಬ್ಬರು ಕರುಳಿನ ಆರೋಗ್ಯ ಮತ್ತು ಆರೋಗ್ಯಕರ ವಯಸ್ಸಾಗುವಿಕೆ ಬಗ್ಗೆ ಹೇಳಿರುವ ಪ್ರಮುಖ ಅಂಶಗಳು ಇಲ್ಲಿವೆ.

1. ಎಲ್ಲರ ಕರುಳೂ ಒಂದೇ ರೀತಿ ಇರಲ್ಲ

ಪ್ರತಿಯೊಬ್ಬರ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಸಂಯೋಜನೆ ಬೇರೆಬೇರೆ. ನಾವು ತಿನ್ನುವ ಆಹಾರ, ಜೀವನಶೈಲಿ, ಪರಿಸರ, ಔಷಧಗಳು ಹಾಗೂ ಆರೋಗ್ಯದ ಸ್ಥಿತಿ ಇದನ್ನು ಬದಲಾಯಿಸಬಹುದು.

2. ಕರುಳಿನ ಸೂಕ್ಷ್ಮಜೀವಿಗಳು ಬದಲಾಗುತ್ತವೆ

ಆಹಾರ ಅಥವಾ ಆರೋಗ್ಯದಲ್ಲಿ ಬದಲಾವಣೆ ಆದ್ರೆ ಕರುಳಿನ ಸೂಕ್ಷ್ಮಜೀವಿಗಳೂ ಬದಲಾಗುತ್ತವೆ. ಆದರೂ ವಯಸ್ಕರಲ್ಲಿ ಈ ವ್ಯವಸ್ಥೆ ಸಾಕಷ್ಟು ಸ್ಥಿರವಾಗಿರುತ್ತದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ.

3. ವಯಸ್ಸಾದಂತೆ ಕರುಳಿನಲ್ಲೂ ಬದಲಾವಣೆ

ವಯಸ್ಸು ಹೆಚ್ಚಾದಂತೆ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆ, ಸಂಯೋಜನೆ ಮತ್ತು ಕಾರ್ಯದಲ್ಲಿ ಬದಲಾವಣೆ ಆಗಬಹುದು. ವಯಸ್ಸಾದವರು ಹಾಗೂ ದೈಹಿಕವಾಗಿ ದುರ್ಬಲರಾಗಿರುವವರಲ್ಲಿ ಈ ಬದಲಾವಣೆ ಹೆಚ್ಚು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳುತ್ತವೆ.

4. ಕರುಳು-ರೋಗನಿರೋಧಕ ಶಕ್ತಿಗೆ ನಂಟು

ಕರುಳಿನ ಸೂಕ್ಷ್ಮಜೀವಿಗಳು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಅಸಮತೋಲನ ಉಂಟಾದರೆ ದೇಹದಲ್ಲಿ ಉರಿಯೂತ ಸೇರಿದಂತೆ ಕೆಲವು ಸಮಸ್ಯೆಗಳ ಜೊತೆ ಸಂಬಂಧ ಹೊಂದಿರಬಹುದು. ಆದರೆ ಇದನ್ನೇ ಕಾಯಿಲೆಗಳಿಗೆ ನೇರ ಕಾರಣ ಅಂತ ಹೇಳಲು ಸಾಧ್ಯವಿಲ್ಲ.

Gut microbes also change.
ಆರೋಗ್ಯದಲ್ಲಿ ಬದಲಾದಂತೆ ಕರುಳಿನ ಸೂಕ್ಷ್ಮಜೀವಿಗಳೂ ಬದಲಾಗುತ್ತವೆ

5. ಕರುಳಿಗೂ ಮೆದುಳಿಗೂ ಸಂಪರ್ಕವಿದೆ

ಕರುಳು ಮತ್ತು ಮೆದುಳಿನ ನಡುವೆ ನೇರ ಸಂಪರ್ಕವಿದೆ. ಕರುಳಿನ ಸೂಕ್ಷ್ಮಜೀವಿಗಳು ಉತ್ಪಾದಿಸುವ ಕೆಲವು ಅಂಶಗಳು ಹಾರ್ಮೋನ್‌ಗಳು ಮತ್ತು ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಕರುಳಿನ ಆರೋಗ್ಯದ ಬಗ್ಗೆ ನಡೆಯುತ್ತಿರುವ ಸಂಶೋಧನೆ ಜೀರ್ಣಕ್ರಿಯೆಗೆ ಮಾತ್ರ ಸೀಮಿತವಾಗಿಲ್ಲ.

6. ನಾವು ತಿನ್ನೋದು ತುಂಬಾ ಮುಖ್ಯ

ನಮ್ಮ ಆಹಾರ ಪದ್ಧತಿ ಕರುಳಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಸ್ಯಾಧಾರಿತ ಹಾಗೂ ನಾರಿನಂಶ ಹೆಚ್ಚಿರುವ ಆಹಾರ ಕರುಳಿನ ಒಳ್ಳೆಯ ಸೂಕ್ಷ್ಮಜೀವಿಗಳಿಗೆ ಸಹಾಯ ಮಾಡಬಹುದು. ಆದರೆ ಒಂದೇ ಒಂದು ಆಹಾರ ಅಥವಾ ಪೂರಕ ಮಾತ್ರೆ ತೆಗೆದುಕೊಂಡರೆ ದೀರ್ಘಾಯುಷ್ಯ ಖಚಿತ ಅಂತ ಹೇಳಲು ಸಾಕಷ್ಟು ಪುರಾವೆಗಳಿಲ್ಲ.

7. ದೀರ್ಘಾಯುಷ್ಯಕ್ಕೂ ಕರುಳಿಗೂ ಸಂಬಂಧವಿದೆಯಾ?

ಕರುಳಿನ ಸೂಕ್ಷ್ಮಜೀವಿಗಳು ವಯಸ್ಸಾಗುವಿಕೆ ಮತ್ತು ಆಯಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಹಲವು ಅಧ್ಯಯನಗಳು ಹೇಳಿವೆ. ಆದರೆ ಕರುಳಿನಲ್ಲಾಗುವ ಬದಲಾವಣೆ ವಯಸ್ಸಾಗುವಿಕೆಗೆ ಕಾರಣವಾ, ವಯಸ್ಸಾಗುವಿಕೆಯ ಪರಿಣಾಮವಾ ಅಥವಾ ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಪೊಲೀಸರಿಗೆ ಬಾಡಿಕ್ಯಾಮ್ ಕಡ್ಡಾಯ ಮಾಡಿ; ದೆಹಲಿ ಹೈಕೋರ್ಟ್‌ಗೆ ಅರ್ಜಿ, ಖಾಕಿ ವಿರುದ್ಧ ಕಿರುಕುಳ ಆರೋಪ! | Police Bodycam

ಹೀಗಾಗಿ ವಯಸ್ಸು ಹೆಚ್ಚಾದಂತೆ ಕರುಳಿನ ಆರೋಗ್ಯದ ಬಗ್ಗೆಯೂ ಗಮನ ಕೊಡುವುದು ಒಳ್ಳೆಯದು. ಸಮತೋಲಿತ ಹಾಗೂ ನಾರಿನಂಶ ಹೆಚ್ಚಿರುವ ಆಹಾರ, ಆರೋಗ್ಯಕರ ಜೀವನಶೈಲಿ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡಬಹುದು. ಯಾವುದೇ ಪೂರಕ ಮಾತ್ರೆ ಅಥವಾ ವಿಶೇಷ ಆಹಾರ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net