ಕಾರ್ತಿಕ ದೀಪಂ ಹಬ್ಬದಂದೇ ವರುಣನ ಆರ್ಭಟ! ತಮಿಳುನಾಡಿನ 9 ಜಿಲ್ಲೆಗಳಲ್ಲಿ ಅಲರ್ಟ್ | Tamil Nadu Rain

 Tamil Nadu Rain
ಕಾರ್ತಿಕ ದೀಪಂ ದಿನ ತಮಿಳುನಾಡಿನ 9 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Published on: 

Tamil Nadu Rain: ಕಾರ್ತಿಕ ದೀಪಂ ಹಬ್ಬದ ಸಂಭ್ರಮದ ನಡುವೆಯೇ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ರಂದು ಒಂಬತ್ತು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಬಂಗಾಳ ಕೊಲ್ಲಿಯ ನೈಋತ್ಯ ಭಾಗದಿಂದ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯವರೆಗೆ ಮೇಲ್ಮೈ ಸುಳಿಗಾಳಿ ಸಹಿತ ವಾಯುಭಾರ ಕುಸಿತದ ಪ್ರದೇಶ ನಿರ್ಮಾಣವಾಗಿದೆ. ಇದರ ಜೊತೆಗೆ ಉತ್ತರ ಕೇರಳದಿಂದ ಕರ್ನಾಟಕದ ಕರಾವಳಿ ಭಾಗದವರೆಗೂ ಸಮುದ್ರ ಮಟ್ಟದಿಂದ ಸುಮಾರು 0.9 ಕಿ.ಮೀ ಎತ್ತರದಲ್ಲಿ ಮತ್ತೊಂದು ವಾಯುಭಾರ ಕುಸಿತದ ವ್ಯವಸ್ಥೆ ಕಂಡುಬಂದಿದೆ. ಈ ಹವಾಮಾನ ಬದಲಾವಣೆಗಳಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ಯಾವ ಜಿಲ್ಲೆಗಳಲ್ಲಿ ಭಾರೀ ಮಳೆ?

ಕಡಲೂರು, ತಿರುವಾರೂರು, ತಂಜಾವೂರು, ಮಯಿಲಾಡುತುರೈ, ಪುದುಕ್ಕೊಟ್ಟೈ, ನಾಗಪಟ್ಟಿಣಂ, ಶಿವಗಂಗೈ, ರಾಮನಾಥಪುರಂ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೂ ಬೀಸಬಹುದು ಎಂದು ಇಲಾಖೆ ತಿಳಿಸಿದೆ. ಇದರ ಜತೆಗೆ ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಿಗೂ ಇದೇ ರೀತಿಯ ಮಳೆ ಎಚ್ಚರಿಕೆ ನೀಡಲಾಗಿದೆ.

ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರ್ಷ

ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟು, ರಾಣಿಪೇಟೆ, ಕಾಂಚೀಪುರಂ, ನೀಲಗಿರಿ, ತಿರುಪ್ಪೂರು, ಕೊಯಮತ್ತೂರು, ಈರೋಡ್, ಧರ್ಮಪುರಿ, ಸೇಲಂ, ಕೃಷ್ಣಗಿರಿ, ವೆಲ್ಲೂರು, ತಿರುಪತ್ತೂರು, ತಿರುವಣ್ಣಾಮಲೈ, ಕಲ್ಲಕುರಿಚಿ, ವಿಲ್ಲುಪುರಂ, ನಾಮಕ್ಕಲ್, ತಿರುಚಿ, ಕರುರ್, ಪೆರಂಬಲೂರು, ದಿಂಡಿಗಲ್, ಅರಿಯಲೂರು, ಮಧುರೈ, ಥೇಣಿ, ವಿರುದುನಗರ, ತೆಂಕಾಸಿ, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಕೆಲವೆಡೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಬಹುದು.

ಚೆನ್ನೈನಲ್ಲಿ ಇಂದಿನ ಹವಾಮಾನ ಹೇಗಿರಲಿದೆ?

ರಾಜಧಾನಿ ಚೆನ್ನೈನಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ನಗರದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಚೆನ್ನೈನಲ್ಲಿ ಗರಿಷ್ಠ ತಾಪಮಾನ 30ರಿಂದ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 24ರಿಂದ 25 ಡಿಗ್ರಿ ಸೆಲ್ಸಿಯಸ್ ಇರಬಹುದು.

ಇದನ್ನೂ ಓದಿ: ಅನ್ನದ ಋಣ ತೀರಿಸಿದ ಬೀದಿನಾಯಿ: ಊಟ ಹಾಕಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಣ್ಣೀರಿನ ವಿದಾಯ ಹೇಳಿದ ಶ್ವಾನ! Loyal Stray Dog

ಕಾರ್ತಿಕ ದೀಪಂ ಹಿನ್ನೆಲೆಯಲ್ಲಿ ತಿರುವಣ್ಣಾಮಲೈನ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಮಳೆ ಮುನ್ಸೂಚನೆ ಇರುವ ಪ್ರದೇಶಗಳ ಜನರು ಹಾಗೂ ಪ್ರಯಾಣಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.