‘ಶಾರ್ಟ್ಸ್ ಹಾಕಬೇಡಿ, ಫುಲ್ ಡ್ರೆಸ್ ಧರಿಸಿ’ ಎಂದ ಅಂಕಲ್; ಮಹಿಳೆಯರು ಕೊಟ್ಟ ಖಡಕ್ ಉತ್ತರ ವೈರಲ್! | Moral Policing

Moral Policin
ವ್ಯಾಯಾಮಕ್ಕೆ ಶಾರ್ಟ್ಸ್ ಧರಿಸಿದ್ದಕ್ಕೆ ಮಹಿಳೆಯರ ಜತೆ ಜಗಳಕ್ಕಿಳಿದ ಸೊಸೈಟಿ ಅಧ್ಯಕ್ಷ
Published on: 

Moral Policing: ಗುಜರಾತ್‌ನಲ್ಲಿ ವ್ಯಾಯಾಮಕ್ಕೆ ಶಾರ್ಟ್ಸ್ ಮತ್ತು ಟ್ಯಾಂಕ್ ಟಾಪ್ ಧರಿಸಿದ್ದ ಮಹಿಳೆಯರಿಗೆ ಸೊಸೈಟಿ ಅಧ್ಯಕ್ಷನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆಕ್ಷೇಪ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರು ಪೂರ್ಣ ಉದ್ದದ ಬಟ್ಟೆ ಧರಿಸಬೇಕು ಎಂದು ಆತ ಒತ್ತಾಯಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕ ಪೊಲೀಸ್‌ಗಿರಿ ಹಾಗೂ ಮಹಿಳೆಯರ ಉಡುಪು ಸ್ವಾತಂತ್ರ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಹಾಗೂ ಅವರ ಸ್ನೇಹಿತ ರನ್ನಿಂಗ್​ ಹೋಗುವ ಮುನ್ನ ಓಪನ್‌ ಜಾಗದಲ್ಲಿ ವಾರ್ಮ್‌ ಅಪ್‌ ಮಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ ಅಲ್ಲಿಗೆ ಬಂದ ವಯಸ್ಸಾದ ವ್ಯಕ್ತಿಯೊಬ್ಬರು ಅವರ ಡ್ರೆಸ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನು ಸೊಸೈಟಿ ಅಧ್ಯಕ್ಷ ಎಂದು ಹೇಳಿಕೊಂಡ ಅವರು, ಮಹಿಳೆಯರು ಯಾವ ಬಟ್ಟೆ ಧರಿಸಬೇಕು ಎಂಬುದನ್ನು ತಾನೇ ನಿರ್ಧರಿಸುವ ಅಧಿಕಾರ ಹೊಂದಿರುವುದಾಗಿ ವಾದಿಸಿದ್ದಾರೆ.

ಉಡುಪು ವಿಚಾರವಾಗಿ ವ್ಯಕ್ತಿಯ ಆಕ್ಷೇಪ

ಮಹಿಳೆಯರು ಶಾರ್ಟ್ಸ್ ಮತ್ತು ಟ್ಯಾಂಕ್ ಟಾಪ್ ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿ, ಪೂರ್ಣ ಉದ್ದದ ಬಟ್ಟೆ ಧರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೂವರು ಸ್ನೇಹಿತರು ಸೊಸೈಟಿಯಲ್ಲಿ ಇಂತಹ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿ, ತಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರನ್ನು ಕರೆಸುವುದಾಗಿ ಬೆದರಿಕೆ ಹಾಕಿದರೂ, ಮೂವರು ಶಾಂತವಾಗಿ ಸ್ಟ್ರೆಚಿಂಗ್ ಮುಂದುವರಿಸಿದ್ದು, ಬಳಿಕ ಆ ವ್ಯಕ್ತಿ ಅಲ್ಲಿಂದ ತೆರಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ನೈತಿಕ ಪೊಲೀಸ್‌ಗಿರಿ ವಿರುದ್ಧ ಮಹಿಳೆಯ ಕಿಡಿ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಅನೂಷಾ ರೆಬೆಲ್ಲೊ, ಆ ವ್ಯಕ್ತಿಯ ವರ್ತನೆಯನ್ನು ನೈತಿಕ ಪೊಲೀಸ್‌ಗಿರಿ ಎಂದು ಟೀಕಿಸಿದ್ದಾರೆ. ಬೇರೆಯವರ ಹಿಂದುಳಿದ ಮನಸ್ಥಿತಿಯಿಂದ ತಮ್ಮ ವರ್ಕೌಟ್‌ ಹಾಳಾಗಲು ಬಿಡಲ್ಲ ಎಂದು ಹೇಳಿದ್ದಾರೆ. ಶಾರ್ಟ್ಸ್ ಮತ್ತು ಟ್ಯಾಂಕ್ ಟಾಪ್‌ ಹಾಕಿದ್ರೆ ಕುಟುಂಬದ ಮೌಲ್ಯಗಳಿಗೆ ಧಕ್ಕೆ ಆಗುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಇನ್ನು, ತಾವು ಉಳಿದುಕೊಂಡಿದ್ದ ಮನೆಯ ಮಾಲೀಕರು ಬಳಿಕ ಕರೆ ಮಾಡಿ ಸೊಸೈಟಿ ಸದಸ್ಯನ ವರ್ತನೆಗೆ ಕ್ಷಮೆ ಕೇಳಿದ್ದರಂತೆ.

ಮಹಿಳೆಯರ ಬೆಂಬಲಕ್ಕೆ ನೆಟ್ಟಿಗರು

ವಿಡಿಯೋ ವೈರಲ್ ಆದ ಬಳಿಕ ಹಲವರು ಮಹಿಳೆಯರು ತಮ್ಮ ಉಡುಪು ಮತ್ತು ವ್ಯಾಯಾಮದ ವಿಚಾರದಲ್ಲಿ ಎದುರಿಸಿದ ಇಂತಹ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೂವರು ಸ್ನೇಹಿತರು ಶಾಂತವಾಗಿ ವ್ಯಕ್ತಿಯ ಮಾತುಗಳನ್ನು ಪ್ರಶ್ನಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರತಿದಿನ ಹೆಚ್ಚುವರಿ ಕೆಲಸ ಮಾಡ್ತೀರಾ? ಮಾರ್ಜಿನಲ್ ಎಫೆಕ್ಟ್ ಹೇಳೋದೇನು? | Marginal Effect

ಕೆಲವರು ಸೊಸೈಟಿ ಅಂಕಲ್‌ಗಳು ಸುಮ್ಮನೆ ಅಧಿಕಾರ ತೋರಿಸೋಕೆ ಇಂಥ ವರ್ತನೆ ಮಾಡ್ತಾರೆ ಅಂತ ಟೀಕಿಸಿದ್ರೆ, ಇನ್ನು ಕೆಲವರು ಮಹಿಳೆಯರು ಏನು ಬಟ್ಟೆ ಹಾಕಬೇಕು ಅನ್ನೋದರಲ್ಲಿ ಯಾರೂ ಅನಗತ್ಯವಾಗಿ ತಲೆ ಹಾಕಬಾರದು ಅಂತ ಅಭಿಪ್ರಾಯಪಟ್ಟಿದ್ದಾರೆ.