SIR | ಹೃದಯಾಘಾತದಿಂದ ಮಹಿಳೆ ಸಾವು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಮೂರನೇ ಬಲಿ ಎಂದು ಟಿಎಂಸಿ ಆರೋಪ!

Bihar SIR Exercise
Published on

ಕೊಲ್ಕತ್ತಾ: ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ನಡೆಸಲಾಗುತ್ತದೆ ಎನ್ನುವ ಭೀತಿಯಿಂದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಈ ಆರೋಪದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದ್ದು, ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿಯೇ ಜನರಲ್ಲಿ ಭಯವನ್ನು ಹುಟ್ಟು ಹಾಕುತ್ತಿದೆ, ಮೃತ ದೇಹಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಭಾನುವಾರ ಬೆಳಿಗ್ಗೆ 60 ವರ್ಷದ ಹಸೀನಾ ಬೇಗಂ ಎಂಬ ಮಹಿಳೆ ರಸ್ತೆಯಲ್ಲಿ ಕುಸಿದು ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದ್ದು. ಎಸ್‌ಐಆರ್ ಪ್ರಕ್ರಿಯೆಯ ಕುರಿತು ಆ ಪ್ರದೇಶದಲ್ಲಿ ಸಭೆ ನಡೆದ ನಂತರ ಅವರು ಒತ್ತಡದಲ್ಲಿದ್ದರು, ಹಸೀನಾ ಬೇಗಂ ಸರಿಯಾದ ದಾಖಲೆಗಳನ್ನು ಹೊಂದಿದ್ದರೂ, 2002 ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಂಡುಬಂದಿರಲಿಲ್ಲ. ಆದ್ದರಿಂದ ಅವರು ತುಂಬಾ ಚಿಂತಿತರಾಗಿದ್ದರು. ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕುಸಿದುಬಿದ್ದರು ಎಂದು ನೆರೆಹೊರೆಯವರು ತಿಳಿಸಿರುವುದಾಗಿ ವರದಿಯಾಗಿದೆ.

ಪಟ್ಟಿ ಪರಿಷ್ಕರಣೆಯ ಸಮಸ್ಯೆಯಿಂದಾಗಿ ಮತ್ತೊಂದು ಸಾವಾಗಿರುವುದು ದುರದೃಷ್ಟಕರ ಸುದ್ದಿ ಎಂದಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ, 60 ವರ್ಷದ ಹಸೀನಾ ಬೇಗಂ ಅವರಿಗೆ ತೀವ್ರ ಹೃದಯಾಘಾತವಾಯಿತು. ಎಂದು ನೆರೆಹೊರೆಯವರು ತಿಳಿಸಿರುವುದಾಗಿ ವರದಿಯಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ನಾಯಕರು ಹೇಳುತ್ತಿರುವುದರಿಂದ ತೀವ್ರ ಒತ್ತಡದಲ್ಲಿದ್ದರು ಎಂದು ತಿಳಿಸಿದ್ದಾರೆ. ಎಸ್‌ಐಆರ್ ಹೆಸರಿನಲ್ಲಿ ಬಿಜೆಪಿ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರಲು ಮತ್ತು ಜನರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದ ಘೋಷ್, ಈ ಭೀತಿ ಮತ್ತೊಂದು ಸಾವಿಗೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ನಾವು ರಾಜಕೀಯವಾಗಿ, ಕಾನೂನುಬದ್ಧವಾಗಿ ಮತ್ತು ಜನಸಂದಣಿಯ ಮೂಲಕ ಇದರ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದರು.

ನಾವು ನೋಡುತ್ತಿರುವುದು ಉದ್ದೇಶಪೂರ್ವಕ ಭಯೋತ್ಪಾದನಾ ಅಭಿಯಾನವಾಗಿದ್ದು, ಅದರ ಊಹಿಸಬಹುದಾದ ಮತ್ತು ಮಾರಕ ಪರಿಣಾಮಗಳು ಈಗಾಗಲೇ ನಮ್ಮ ಕಣ್ಣು ಮುಂದಿವೆ, ಎಸ್‌ಐಆರ್ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವ ಉದ್ದೇಶವಾಗಿಲ್ಲ, ಸ್ವತಃ ಅಮಿತ್ ಷಾ ಹೇಳಿದಂತೆ, ಇದು ಪತ್ತೆ ಹಚ್ಚಲು, ಅಳಿಸಲು ಮತ್ತು ಗಡೀಪಾರು ಮಾಡಲು ಒಂದು ರೀತಿಯ ಸಾಧನವಾಗಿದೆ. ಇದಕ್ಕೆ ಇಂದು ಡಂಕುನಿಯ ವಾರ್ಡ್ 20 ರಲ್ಲಿ 60 ವರ್ಷದ ಮಹಿಳೆಯೊಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಿಜೆಪಿ ಅಧಿಕಾರಕ್ಕಾಗಿ ತುಂಬಾ ಹತಾಶವಾಗಿದೆ, ಅರ್ಹತೆಯ ಆಧಾರದ ಮೇಲೆ ಮತ ಪಡೆಯುವ ಬದಲು, ಭಯ ಸೃಷ್ಟಿಸಲು ಆದ್ಯತೆ ನೀಡುತ್ತದೆ ಎಂದು ಆರೋಪಿಸಿದೆ.

ಇದು ಮೂರನೇ ಆರೋಪ

ಕಳೆದ ಒಂದು ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವಿಷಯವಾಗಿ ಇದು ಮೂರನೇ ಆರೋಪವಾಗಿದ್ದು, ಇದಕ್ಕೂ ಮೊದಲು, ಉತ್ತರ 24 ಪರಗಣ ಜಿಲ್ಲೆಯ 57 ವರ್ಷದ ಪ್ರದೀಪ್ ಕರ್ ಎಂಬ ವ್ಯಕ್ತಿ "NRC ಭಯ"ದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ "ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಭಯದ ರಂಗಮಂದಿರವನ್ನಾಗಿ" ಪರಿವರ್ತಿಸುತ್ತಿದೆ ಎಂದು ಆರೋಪಿಸಿದ್ದರು, ಆದರೆ ಬಿಜೆಪಿ ನಾಯಕರು ಟಿಎಂಸಿಯ ಹೇಳಿಕೆಗಳನ್ನು "ರಾಜಕೀಯ ಪ್ರಚಾರ" ಎಂದು ಘಟನೆಯ ಕುರಿತಾದ ತನಿಖೆಗೆ ಒತ್ತಾಯಿಸಿದರು.

ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ ಯಾವಾಗ..?

ಮತದಾರರ ಪಟ್ಟಿಯನ್ನು ಪರಿಶೀಲಿಸಲು ನಡೆಯುತ್ತಿರುವ ಎರಡನೇ ಹಂತದ SIR ಪ್ರಕ್ರಿಯೆ ನವೆಂಬರ್ 4 ರಿಂದ ಡಿಸೆಂಬರ್ 4 ರವರೆಗೆ ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಮತದಾರರ ಪಟ್ಟಿಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಚುನಾವಣೆಗೂ ಮೊದಲು ನಡೆಸಲಾಗುವ ಪ್ರಮಾಣಿತ ಪರಿಷ್ಕರಣಾ ವ್ಯಾಯಾಮವಾಗಿದೆ ಎಂದು ಚುನಾವಣಾ ಆಯೋಗವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net