‘ಅಪ್ಪ ಅಂದ್ರೆ ಹೀಗಿರಬೇಕು’... ಸಂದರ್ಶನಕ್ಕೂ ಮುನ್ನ ಮಗನ ತಲೆ ಬಾಚಿ, ಸಿಹಿ ತಿನ್ನಿಸಿದ ತಂದೆ | UPPSC Interview Viral Video

ಯುಪಿಪಿಎಸ್‌ಸಿ ಸಂದರ್ಶನಕ್ಕೂ ಮುನ್ನ ತಂದೆಯೊಬ್ಬರು ಮಗನ ಕೋಟ್ ಸರಿಪಡಿಸಿ, ತಲೆ ಬಾಚಿ ಸಿಹಿ ತಿನ್ನಿಸಿದ ವಿಡಿಯೋ ವೈರಲ್ ಆಗಿದೆ. ತಂದೆ-ಮಗನ ಈ ಆತ್ಮೀಯ ಕ್ಷಣಕ್ಕೆ ನೆಟ್ಟಿಗರ ಮನ ಗೆದ್ದಿದೆ.
UPPSC Interview Viral Video
ಯುಪಿಪಿಎಸ್‌ಸಿ ಸಂದರ್ಶನಕ್ಕೂ ಮುನ್ನ ಮಗನ ತಲೆ ಬಾಚಿದ ಅಪ್ಪ
Published on: 

UPPCS 2025: ಸರ್ಕಾರಿ ಉದ್ಯೋಗದ ಸಂದರ್ಶನಕ್ಕೆ ತೆರಳುವ ಮುನ್ನ ತಂದೆಯೊಬ್ಬರು ಮಗನನ್ನು ಪ್ರೀತಿಯಿಂದ ರೆಡಿ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಗ್‌ರಾಜ್‌ನ ಉತ್ತರ ಪ್ರದೇಶ ಲೋಕಸೇವಾ ಆಯೋಗದ (UPPSC) ಕಚೇರಿಯ ಸರಸ್ವತಿ ಭವನದಲ್ಲಿ ಈ ಮನಮುಟ್ಟುವ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂದರ್ಶನಕ್ಕೆ ತೆರಳುವ ಮುನ್ನ ತಂದೆ ಮಗನ ಕೋಟ್ ಸರಿಪಡಿಸಿದ್ದಾರೆ. ಬಳಿಕ ಜೇಬಿನಿಂದ ಬಾಚಣಿಗೆ ತೆಗೆದು ಮಗನ ಕೂದಲನ್ನೂ ಅಚ್ಚುಕಟ್ಟಾಗಿ ಬಾಚಿದ್ದಾರೆ. ಮಗ ಸಂದರ್ಶನಕ್ಕೆ ಅಚ್ಚುಕಟ್ಟಾಗಿ ತೆರಳಬೇಕು ಎಂಬ ತಂದೆಯ ಕಾಳಜಿ ಈ ಕ್ಷಣದಲ್ಲಿ ಎದ್ದು ಕಾಣಿಸಿದೆ.

ಮಗನಿಗೆ ಸಿಹಿ ತಿನ್ನಿಸಿದ ತಂದೆ

ಕೂದಲು ಹಾಗೂ ಕೋಟ್ ಸರಿಪಡಿಸಿದ ಬಳಿಕ ತಂದೆ ಮಗನಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದ್ದಾರೆ. ಪರೀಕ್ಷೆ, ಸಂದರ್ಶನ ಅಥವಾ ಹೊಸ ಕೆಲಸಕ್ಕೆ ತೆರಳುವ ಮುನ್ನ ಮಕ್ಕಳಿಗೆ ಸಿಹಿ ತಿನ್ನಿಸಿ ಶುಭ ಕೋರುವುದು ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯ. ಈ ವಿಡಿಯೋದಲ್ಲೂ ಅಂತಹ ಆತ್ಮೀಯ ಕ್ಷಣ ಕಂಡುಬಂದಿದೆ.

ಸಂದರ್ಶನಕ್ಕೆ ತೆರಳುವ ಮುನ್ನ ಮಗ ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ತಂದೆ-ಮಗನ ನಡುವಿನ ಈ ಸರಳ ಹಾಗೂ ಭಾವನಾತ್ಮಕ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಹಲವರ ಗಮನ ಸೆಳೆದಿದೆ.

ಅಭ್ಯರ್ಥಿಗಳಿಗೆ ಕುಟುಂಬದ ಬೆಂಬಲ ಮುಖ್ಯ

ಸರ್ಕಾರಿ ಉದ್ಯೋಗ ಪಡೆಯುವ ಕನಸಿಗಾಗಿ ಅಭ್ಯರ್ಥಿಗಳು ಹಲವು ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಈ ಹಾದಿಯಲ್ಲಿ ಕುಟುಂಬದ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲವೂ ಪ್ರಮುಖವಾಗಿರುತ್ತದೆ. ಇದೀಗ ವೈರಲ್ ಆಗಿರುವ ಈ ತಂದೆ-ಮಗನ ವಿಡಿಯೋ, ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲವೂ ಇರುತ್ತದೆ ಎಂಬುದನ್ನು ನೆನಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net