ರಸ್ತೆ ಮಾಡೋಕೆ ತಂದ ಸಿಮೆಂಟ್‌ನ್ನೇ ಬಾಚಿಕೊಂಡು ಹೋದ್ರು! ಪಾತ್ರೆ, ಬಕೆಟ್, ಹಿಡಿದು ಬಂದ ಜನ | Bihar Road Construction

ಬಿಹಾರದ ಜೆಹಾನಾಬಾದ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಹಾಕಿದ್ದ ಹಸಿ ಸಿಮೆಂಟ್ ಮಿಶ್ರಣವನ್ನೇ ಗ್ರಾಮಸ್ಥರು ಬಕೆಟ್, ಬುಟ್ಟಿ, ಪಾತ್ರೆಗಳಲ್ಲಿ ಬಾಚಿಕೊಂಡು ಹೋದ ಘಟನೆ ವೈರಲ್ ಆಗಿದೆ.
Bihar Road Construction
ರಸ್ತೆಗೆ ಹಾಕಿದ್ದ ಹಸಿ ಸಿಮೆಂಟ್ ಮಿಶ್ರಣವನ್ನೇ ಮನೆಗೆ ಹೊತ್ತೊಯ್ದ ಗ್ರಾಮಸ್ಥರು
Published on

Bihar Viral Video: ಪಾಟ್ನಾದಲ್ಲಿ ರಸ್ತೆ ನಿರ್ಮಾಣಕ್ಕೆ ತಂದಿದ್ದ ಹಸಿ ಸಿಮೆಂಟ್ ಮಿಶ್ರಣವನ್ನೇ ಗ್ರಾಮಸ್ಥರು ಬಾಚಿಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಪಾತ್ರೆ, ಬಕೆಟ್, ಬುಟ್ಟಿಗಳಲ್ಲಿ ಸಿಮೆಂಟ್ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್ ಬ್ಲಾಕ್‌ನ ಔದಾನ್ ಬಿಘಾ ಗ್ರಾಮದಲ್ಲಿ ನಡೆದಿದ್ದು, ಇದೀಗ ವಿಡಿಯೋ ಮತ್ತೆ ಹರಿದಾಡುತ್ತಿದೆ.

ರಸ್ತೆಗೂ ಮುನ್ನ ಸಿಮೆಂಟ್ ಮನೆಗೆ

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ನಿರ್ಮಿಸುತ್ತಿದ್ದ 3 ಕಿ.ಮೀ. ರಸ್ತೆ ಕಾಮಗಾರಿ ವೇಳೆ, ರಸ್ತೆ ಸಮತಟ್ಟುಗೊಳಿಸುವ ಮೊದಲೇ ಗ್ರಾಮಸ್ಥರು ಬಂದು ಹಸಿ ಸಿಮೆಂಟ್ ಮಿಶ್ರಣವನ್ನು ತಟ್ಟೆ, ಬಕೆಟ್, ಬುಟ್ಟಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಮನೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಸಿಮೆಂಟ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ

ಸಿಮೆಂಟ್ ಮಿಶ್ರಣವನ್ನು ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದರಿಂದ ರಸ್ತೆ ಕಾಮಗಾರಿಗೂ ತೊಂದರೆಯಾಗಿದೆ. ಹಾಕಿದ್ದ ಮಿಶ್ರಣ ಬಹುತೇಕ ಖಾಲಿಯಾದ ಹಿನ್ನೆಲೆಯಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಆಸ್ತಿ ಹಾಗೂ ನಾಗರಿಕ ಪ್ರಜ್ಞೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

‘ಟೇಕ್ ಹೋಮ್ ಇನ್‌ಫ್ರಾಸ್ಟ್ರಕ್ಚರ್’ ಅಂತ ವ್ಯಂಗ್ಯ

ವಿಡಿಯೋ ನೋಡಿದ ನೆಟ್ಟಿಗರು ಘಟನೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಕೆಲವರು ಇದನ್ನು ‘ಟೇಕ್ ಹೋಮ್ ಇನ್‌ಫ್ರಾಸ್ಟ್ರಕ್ಚರ್ ಯೋಜನೆ’ ಎಂದು ಕರೆದರೆ, ಮತ್ತೆ ಕೆಲವರು ಬಿಹಾರದ ‘ರಿಸೈಕ್ಲಿಂಗ್ ಗೇಮ್’ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ ಇಂಥ ಪ್ರಕರಣಗಳು ಹೊಸದಲ್ಲ

ಬಿಹಾರದಲ್ಲಿ ಸಾರ್ವಜನಿಕ ಆಸ್ತಿ ಕಳ್ಳತನದ ಇಂಥ ವಿಚಿತ್ರ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ರೋಹತಾಸ್‌ನಲ್ಲಿ ಕಬ್ಬಿಣದ ಸೇತುವೆ ಕದ್ದರೆ, ಸಮಸ್ತಿಪುರ ಮತ್ತು ಮಧುಬನಿಯಲ್ಲಿ ರೈಲ್ವೆ ಇಂಜಿನ್, ಹಳಿಗಳ ಕಳ್ಳತನವಾಗಿತ್ತು. ಪಾಟ್ನಾದಲ್ಲಿ ಮೊಬೈಲ್ ಟವರ್ ಕದ್ದ ಪ್ರಕರಣವೂ ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net