

ಶಿವಮೊಗ್ಗ: ಯಜ್ಞ ನೆರವೇರಿದ ಪರಿಸರ ಶುದ್ಧವಾಗಿರುತ್ತದೆ. ವಿಜ್ಞಾನಿಗಳು ಸಹ ಅದನ್ನು ಅನುಮೋದಿಸಿದ್ದಾರೆ. ಯಜ್ಞಕ್ಕೆ ಸಂಬಂಧಿಸಿದ ದೇವತೆಗಳ ಸಾನ್ನಿಧ್ಯವೂ ಅಲ್ಲಿರುತ್ತದೆ ಎಂಬುದು ಋಷಿಮುನಿಗಳ ಅನುಭವ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.
ಸ್ವರ್ಣವಲ್ಲಿ ಸೀಮಾ ಪರಿಷತ್, ಸ್ವರ್ಣ ರಶ್ಮೀ ಟ್ರಸ್ಟ್ ಶಿವಮೊಗ್ಗ ಹಾಗೂ ಯಲ್ಲಾಪುರ ಭಟ್ರಕೇರಿಯ ಆರ್ಷ ವಿದ್ಯಾ ಟ್ರಸ್ಟ್‌ನಿಂದ ಗುಂಡಪ್ಪ ಶೆಡ್‌ನ ಸ್ವರ್ಣರಶ್ಮೀ ಗೃಹದ ಸರ್ವಜ್ಞೇಂದ್ರ ಯಾಗಶಾಲೆಯಲ್ಲಿ ಬುಧವಾರ ಸಾಮ ಸಂಹಿತಾ ಯಾಗದ ಪೂರ್ಣಾಹುತಿಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಯಜ್ಞದ ವಾತಾವರಣ ಎಲ್ಲರಿಗೂ ಹಿತವನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ಆಮಂತ್ರಣ ಇಲ್ಲದಿದ್ದರೂ ಯಜ್ಞದಲ್ಲಿ ಭಾಗಿಯಾಗಬೇಕು. ಪರಿಚಿತರು, ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಭಾಗವಹಿಸಲು ಆಮಂತ್ರಣ ಬೇಕು. ಯಜ್ಞದ ವೇದಿಕೆ ಆಮಂತ್ರಣಕ್ಕೆ ಹೊರತಾದುದು ಎಂದರು.
ಯಜ್ಞದ ವೇದಿಕೆಯಲ್ಲಿ ಯಾರಾದರೂ ನಮಗೆ ಆದರಾತಿಥ್ಯ ಮಾಡಬೇಕೆಂದು ಬಯಸುವುದಿಲ್ಲ. ಬದಲಾಗಿ ಆ ವಾತಾವರಣದಿಂದ ನಮಗೆ ಆನಂದ ಉಂಟಾಗುತ್ತದೆ. ದೈವಿಕ ಭಾವನೆಯಿಂದ ಮನಸ್ಸು ಶುದ್ಧವಾಗುತ್ತದೆ. ನಾಲ್ಕು ವೇದಗಳಲ್ಲೂ ಅನೇಕ ಶಾಖೆಗಳಿವೆ. ಸಾಮವೇದ ತುಂಬ ವಿಶೇಷವಾದುದು. ಸಾಮವೇದದಲ್ಲಿ ವಿಶೇಷ ಸಾನ್ನಿಧ್ಯವಿದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಸಾಮವಿಲ್ಲದ ಯಜ್ಞವು ಯಜ್ಞವೇ ಅಲ್ಲ ಎಂಬ ಮಾತಿದೆ. ಬ್ರಹಜ್ಞಾನದ ಪ್ರಕಾರದಲ್ಲೂ ಸಾಮವೇದಕ್ಕೆ ವಿಶಿಷ್ಟ ಮಹತ್ವವಿದೆ ಎಂದು ಹೇಳಿದರು.
ವೈದಿಕ ಸಾಹಿತ್ಯದಲ್ಲಿ ಸಾಮವೇದ ವಿಶೇಷ ಸ್ಥಾನ ಪಡೆದಿದೆ. ಅಲ್ಲದೆ ಅತ್ಯಂತ ಪ್ರಾಚೀನವಾದುದು. ಸಹಸ್ರಾರು ವರ್ಷಗಳಿಂದ ವೇದಗಳಿವೆ. ಏಳು ಸ್ವರಗಳ ಮೂಲಕ ಭಗವಂತ ಈ ಜಗತ್ತಿಗೆ ಶಕ್ತಿ ತುಂಬುತ್ತಾನೆ. ಏಳು ಸ್ವರಗಳು ಅನಾದಿ ಕಾಲದಿಂದಲೂ ಇವೆ. ಈ ಏಳು ಸ್ವರಗಳು ಸಾಮವೇದದಲ್ಲಿ ಸೇರಿಕೊಂಡಿವೆ ಎಂದು ತಿಳಿಸಿದರು.
ಸ್ವರ್ಣರಶ್ಮೀ ಟ್ರಸ್ಟ್ ಅಧ್ಯಕ್ಷ ಅಶೋಕ ಜಿ. ಭಟ್, ಪಿ.ಪಿ.ಹೆಗಡೆ, ಲಕ್ಷ್ಮೀನಾರಾಯಣ ಜೋಷಿ, ವೈದಿಕರು, ಭಕ್ತರು ಇದ್ದರು.