

ಶಿವಮೊಗ್ಗ: ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಇವುಗಳ ನಡುವಿನ ಬದುಕು ನಮ್ಮ ಕೈಯಲ್ಲಿದೆ. ಅದನ್ನು ಹೇಗೆ ಸಾರ್ಥಕ್ಯ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು ಎಂದು ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಿರ್ಮಲ ಅಭಿನಂದನೆ ಮತ್ತು ಆರೋಗ್ಯ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾದರೆ ಹಣ, ಕೀರ್ತಿ, ನೆಮ್ಮದಿ ಎಲ್ಲವೂ ತಾನಾಗಿಯೇ ಬರಲಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ವೃತ್ತಿ ಒತ್ತಡದಿಂದ ವೈದ್ಯರ ಆಯಸ್ಸು ನಾಲ್ಕು ವರ್ಷ ಇಳಿಕೆಯಾಗಿದೆ. 70-80ರ ದಶಕದಲ್ಲಿದ್ದ ವೈದ್ಯರ ಕಾರ್ಯನಿರ್ವಹಣೆ ಬೇರೆ ರೀತಿಯಾಗಿತ್ತು. ಆದರೆ ಇಂದಿನ ಒತ್ತಡ ಬೇರೆ ಸ್ವರೂಪದಲ್ಲಿದೆ. ಇದನ್ನು ನಿಭಾಸಿಕೊಂಡು ಹೋಗುವ ಕೌಶಲ ಬೇಕು. ಜತೆಗೆ ದೈನಂದಿನ ಕೆಲಸದಲ್ಲಿ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ, ಗ್ರಂಥ ಸಂಪಾದಕ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ಅದನ್ನು ದಾಖಲಿಸುವ ಕೆಲಸ ಗಮನಾರ್ಹವಾಗಿ ಆಗುತ್ತಿಲ್ಲ. ಇದು ಮನುಷ್ಯ ಚರಿತ್ರೆ ಬಗ್ಗೆ ನಿರ್ಲಕ್ಷೃವಿದೆ ಎಂಬುದನ್ನು ತೋರಿಸುತ್ತದೆ. ಆದರೆ ದೈವದ ಕಲ್ಪನೆಯಲ್ಲಿ ಹೆಚ್ಚಿನ ಸಾಧನೆ, ಐತಿಹ್ಯ, ಪವಾಡ ಎಲ್ಲವೂ ಇರುತ್ತವೆ. ಅವು ದಾಖಲಾಗುತ್ತವೆ. ಹೀಗಾಗಿ ಈ ಕೃತಿಯ ಮೂಲಕ ಡಾ. ನಿರ್ಮಲಾ ಅವರ ಸಾಧನೆಯನ್ನು ದಾಖಲಿಸುವ ಯತ್ನ ಮಾಡಲಾಗಿದೆ ಎಂದರು.
ಇದೇ ವೇಳೆ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು. ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮನೋರೋಗ ತಜ್ಞ ಡಾ. ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರಸೂತಿ ತಜ್ಞೆ ಡಾ. ನಿರ್ಮಲಾ, ಡಾ. ಪಲ್ಲವಿ ಉಪಸ್ಥಿತರಿದ್ದರು.