ಶಾಸಕರ ಅಸಮಾಧಾನವೇ ಸಾಕ್ಷಿ: ಎನ್.ರವಿಕುಮಾರ್ ಟೀಕೆ | CM Siddaramaiah fail

MLC ravikumar
Published on

ಬೆಂಗಳೂರು: ಕಾಂಗ್ರೆಸ್ ಸರಕಾರವು ದಿನದಿಂದ ದಿನಕ್ಕೆ ಬರ್ಬಾದ್ ಆಗುತ್ತಿದೆ. ಅಸಮಾಧಾನಿತ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಬಂದಿದ್ದು, ಮುಂದೆ ರಾಹುಲ್ ಗಾಂಧಿ ಬರಬೇಕಾಗಬಹುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ- ಹೀಗೆ ಅನೇಕರನ್ನು ಕರೆದಿದ್ದಾರೆ. ಅಸಮಾಧಾನಿತರ ಸಂಖ್ಯೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಸುರ್ಜೇವಾಲಾ ಧಾವಿಸಿದ್ದಾರೆ ಎಂದರು.

ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗುತ್ತಿಲ್ಲ; ತಮಗೆ ಅನುದಾನ ಸಿಗುತ್ತಿಲ್ಲ, ನಾವು ಕ್ಷೇತ್ರದಲ್ಲಿ ಮುಖ ಇಟ್ಟುಕೊಂಡು ಓಡಾಡುವುದು ಹೇಗೆ, ಜನರಿಗೆ ಏನು ಉತ್ತರ ಕೊಡಬೇಕು ಎಂದು ಅಸಮಾಧಾನದಿಂದ ಮಾತನಾಡಿರುವುದು, ಎಐಸಿಸಿಗೆ ಪತ್ರ ಬರೆದಿರುವುದು ಕಂಡುಬಂದಿದೆ ಎಂದು ಹೇಳಿದರು.

ಸಿಎಂ, ಡಿಸಿಎಂ ವಿಫಲ

ಸ್ವಪಕ್ಷದ ಶಾಸಕರ ಅಹವಾಲು ಕೇಳಿ ಅಸಮಾಧಾನ ಶಮನ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲರೂ ವಿಫಲವಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.

ಬಿಲ್ ಪಾವತಿಯಾಗುವುದಿಲ್ಲ ಎಂಬ ಕಾರಣಕ್ಕೆ ರಸ್ತೆ, ಕಟ್ಟಡ ಕಾಮಗಾರಿಗಳಿಗೆ ಕರೆದ ಟೆಂಡರ್‌ನಲ್ಲಿ ರಾಜ್ಯದ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ. ಮತ್ತೊಂದೆಡೆ ಅನುದಾನ ಸಿಗುತ್ತಿಲ್ಲವೆಂಬ ಕೊರಗು, ಮುನಿಸಿರುವ ಕಾಂಗ್ರೆಸ್ ಶಾಸಕರ ದೊಡ್ಡ ಪಟ್ಟಿಯೆ ಇದೆ ಎಂದು ಎನ್.ರವಿಕುಮಾರ್ ಕುಟುಕಿದರು.

ಯಾರಿಗೂ ರಕ್ಷಣೆಯಿಲ್ಲ

ರಾಜ್ಯದಲ್ಲಿ ಮಹಿಳೆಯರು, ಜನರಿಗೆ ರಕ್ಷಣೆ ಇಲ್ಲ. ಎಲ್ಲಿ ಬೇಕಾದರೆ ಅಲ್ಲಿ ಅತ್ಯಾಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಹಿಳೆ ಹತ್ಯೆ ಮಾಡಿ ಬಿಬಿಎಂಪಿ ಕಸದ ಲಾರಿಗೆ ತುಂಬಿದ್ದಾರೆ. ಕಾನೂನು ಸುವ್ಯವಸ್ಥೆ ಎಕ್ಕುಟ್ಟು ಹೋಗಿದೆ. ಹುಲಿಗಳು, ಅನೆಗಳು, ಜಿಂಕೆಗಳ ಹತ್ಯೆಯಾಗುತ್ತಿದ್ದು, ನಾಡಿಗೂ- ಕಾಡಿಗೂ ರಕ್ಷಣೆ ಇಲ್ಲವೆಂದು ಕಿಡಿಕಾರಿದರು.

ಹಗರಣಗಳ ಸರಣಿ, ಕಾಲ್ತುಳಿತ ದುರಂತ, ಅಕ್ರಮಗಳು, ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರಲ್ಲಿ ವಿಲ, ಸ್ವಪಕ್ಷದ ಶಾಸಕರ ಅಳಲು ಆಲಿಸಲು ಸಾಧ್ಯವಾಗುತ್ತಿಲ್ಲ. ಜನರ ಭಾವನೆಗೆ ಓಗೊಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net