

ತೀರ್ಥಹಳ್ಳಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ವಿಶ್ವನಾಥ ಶೆಟ್ಟಿ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಇವರನ್ನು ಜಿಲ್ಲಾಧಿಕಾರಿ ವಜಾಗೊಳಿಸಬೇಕು ಎಂದು ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಆಗ್ರಹಿಸಿದ್ದಾರೆ.
ಸದರಿ ವ್ಯಕ್ತಿ ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಗ್ರಹಿಸಿದ್ದ ಮರಗಳ ಅಪಹರಣ ಸೇರಿ ಕ್ರಿಮಿನಲ್ ಮತ್ತು ಸಿವಿಲ್ ಅಪರಾಧ ಪ್ರಕರಣಗಳಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದಾರೆ. ಇನ್ನು ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೂ ಇಂಥವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಿದ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಹಿಂದು ಧಾರ್ಮಿಕ ದತ್ತಿ ಕಾಯ್ದೆ-1997ರ ಅನ್ವಯ ಕ್ರಿಮಿನಲ್ ಅಪರಾಧದಲ್ಲಿ ಶಿಕ್ಷೆಗೊಳಗಾದಲ್ಲಿ ದೇವಸ್ಥಾನ ಸಮಿತಿಯಲ್ಲಿರಲು ಅನರ್ಹರಾಗುತ್ತಾರೆ ಎಂದು ಉಲ್ಲೇಖವಾಗಿದೆ. ಆದರೂ ಇಂತಹ ವ್ಯಕ್ತಿಗೆ ತಾನು ಸರಳ ಸಜ್ಜನಿಕೆ, ಗಾಂಧಿತತ್ವದ ಪ್ರತಿಪಾದಕ ಎಂದೆಲ್ಲ ಹೇಳಿಕೊಳ್ಳುವ ಕಿಮ್ಮನೆ ರತ್ನಾಕರ್ ಅವರು ಕುಮ್ಮಕ್ಕು ನೀಡುತ್ತಿರುವುದು ಅವರ ಆಷಾಢಭೂತಿತನ ಬಯಲಿಗೆ ಬಂದಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ದಸರಾ ಸಿದ್ಧತೆಗೆ ಉದ್ದೇಶಪೂರ್ವಕವಾಗಿ ಶಾಸಕರ ಅನುಪಸ್ಥಿತಿಯಲ್ಲಿ ಒಂದು ಗುಂಪಿನ ಸಭೆ ಕರೆದಿದ್ದಾರೆ. ತನ್ನ ಅಧ್ಯಕ್ಷತೆಯ ಸಂಚಾಲನಾ ಸಮಿತಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿರುವುದನ್ನು ಜನತೆ ಗಮನಿಸಬೇಕಿದೆ. ವಿಶ್ವನಾಥ ಶೆಟ್ಟಿ ಅವರನ್ನು ವಜಾ ಮಾಡದಿದ್ದರೆ ಅವರ ನೇಮಕಕ್ಕೆ ಕಾರಣರಾದವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.