

ಶಿವಮೊಗ್ಗ: ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಉಚಿತ ಟೈಫಾಯಿಡ್ ಲಸಿಕೆಯನ್ನು ಸರ್ಕಾರಿ ಶಾಲೆ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಸರ್ಜಿ ಫೌಂಡೇಷನ್ ಎಂಡಿ ಡಾ. ಧನಂಜಯ ಸರ್ಜಿ ಹೇಳಿದರು.
ನಗರದ ಎಸ್‌ಪಿಎಂ ರಸ್ತೆಯ ಭೂಪಾಳಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಜಿ ಫೌಂಡೇಷನ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೌಂಡ್ ಟೇಬಲ್ ಇಂಡಿಯಾ ಶಾಖೆ ಶಿವಮೊಗ್ಗ ಘಟಕದ ಆಶ್ರಯದಲ್ಲಿ ಶುಕ್ರವಾರ ಬೆಳಗ್ಗೆ ಮಕ್ಕಳ ಆರೋಗ್ಯ ತಪಾಸಣೆ , ಉಚಿತ ಟೈಫಾಯಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಗಾಲ ಹಾಗೂ ನೆರೆ ಸಂದರ್ಭ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಜಹ. ಈ ನಿಟ್ಟಿನಲ್ಲಿ ರೋಗಗಳ ತಡೆಗಟ್ಟಲು ಮುನ್ನೆಚ್ಚರಿಕೆ ಸಲುವಾಗಿ ಆರೋಗ್ಯ ತಪಾಸಣೆ, ಉಚಿತ ಲಸಿಕಾ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರೃ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಡಿ ಒಟ್ಟು 2 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಅದರ ಭಾಗವಾಗಿ ಶುಕ್ರವಾರ ಕಾರ್ಯಕ್ರಮ ನಡೆಸಲಾಯಿತು ಎಂದರು.
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರವಿ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯೆ ಕಲ್ಪನಾ ರಮೇಶ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್, ಶಾಲೆಯ ಮುಖ್ಯಶಿಕ್ಷಕಿ ಎಚ್.ಆರ್.ಸರಸ್ವತಿ, ಸಹ ಶಿಕ್ಷಕಿ ಜಯಶ್ರೀ, ದಾನಿಗಳಾದ ವಿಶ್ವೆಂದ್ರ ಭೂಪಾಳಂ, ಶಿವಣ್ಣ, ಕೋಟೆ ಗೆಳೆಯರ ಬಳಗದ ಎಚ್.ಎಸ್.ಧನಂಜಯ, ರಂಜಿತ್, ಪ್ರಶಾಂತ್, ಸತೀಶ್, ರಾಮಚಂದ್ರಪ್ಪ, ಎಸ್‌ಡಿಎಂಸಿ ಸದಸ್ಯರು ಭಾಗವಹಿಸಿದ್ದರು. ಜತೆಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.