

ರಿಪ್ಪನ್‌ಪೇಟೆ: ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಕಾಶಮಕ್ಕಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದ ‘ಆತ್ಮಬಲಿ’ ಶಿಲ್ಪ ಮತ್ತು ‘ಎಡಗೈವೀರನ ಮಹಾಸತಿ’ ಶಿಲ್ಪಗಳು ಪತ್ತೆಯಾಗಿವೆ.
ಗ್ರಾಮದ ಜಮೀನಿನಲ್ಲಿ ಜನರಿಂದ ಪೂಜಿಸಲ್ಪಡುತಿದ್ದ ಐತಿಹಾಸಿಕ ಕುರುಹುಗಳನ್ನು ಆದಿತ್ಯ ನಂಜವಳ್ಳಿ ಮತ್ತು ನಿತ್ಯಾನಂದ ಎಂ. ಬಿಳಕಿ ಅವರು ಸ್ಥಳ ಅಧ್ಯಯನ ಮಾಡಿದ್ದಾರೆ.
ಮಲೆನಾಡಲ್ಲಿ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳು ಕಂಡುಬರುವುದು ಸಹಜ. ಆದರೆ ಸ್ವಯಂ ಪ್ರಾಣತ್ಯಾಗದ ವಿಶಿಷ್ಟ ಪರಂಪರೆ ಸಾರುವ ಆತ್ಮಬಲಿ ಹಾಗೂ ಎಡಗೈ ಯುದ್ಧ ಪ್ರವೀಣನ ಸ್ಮಾರಕ ಶಿಲ್ಪ ಒಂದೇ ಗ್ರಾಮದಲ್ಲಿ ಲಭ್ಯವಾಗಿರುವುದು ವಿಶೇಷ.
ಕರ್ನಾಟಕದ ಮಧ್ಯಕಾಲೀನ ಇತಿಹಾಸದಲ್ಲಿ ಸ್ವಾಮಿಭಕ್ತಿ ಮತ್ತು ಕರ್ತವ್ಯನಿಷ್ಠೆಗಾಗಿ ಪ್ರಾಣತ್ಯಾಗ ಮಾಡುವ ವೇಳವಾಳಿ, ಜೋಳವಾಳಿ, ಗರುಡ ಮುಂತಾದ ಆಚರಣೆಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವೇಳವಾಳಿ ಪದ್ಧತಿಯು ಅರಸನ ಆಪ್ತ ಅಂಗರಕ್ಷಕರು ತಮ್ಮ ಒಡೆಯನ ಮರಣಾನಂತರ ತಾವೂ ಪ್ರಾಣಾರ್ಪಣೆ ಮಾಡುವ ಕಠಿಣ ಪ್ರತಿಜ್ಞೆಯನ್ನು ಸೂಚಿಸುತ್ತದೆ. ಆಕಾಶಮಕ್ಕಿಯಲ್ಲಿ ಪತ್ತೆಯಾಗಿರುವ ಶಿಲ್ಪವು ದಂಪತಿ ಒಟ್ಟಾಗಿ ಆತ್ಮಬಲಿ ಮಾಡಿರುವ ಅಪರೂಪದ ಮಾಹಿತಿಯನ್ನು ಒಳಗೊಂಡಿದೆ ಎಂದು ತಜ್ಞರು ವಿವರಿಸುತ್ತಾರೆ.
ಗ್ರಾಮದಲ್ಲಿ ಸ್ಥಳೀಯರಿಂದ ಬಾಲರಾಮ ಎಂದು ಪೂಜಿಸಲ್ಪಡುತ್ತಿರುವ ಮಾಸ್ತಿಕಲ್ಲು ವಾಸ್ತವವಾಗಿ ಓರ್ವ ಎಡಗೈವೀರನ ಮಹಾಸತಿ ಶಿಲ್ಪವಾಗಿದೆ. ಈ ವೀರನು ಎಡಗೈಯಲ್ಲಿ ಯುದ್ಧ ಮಾಡುವ ಪ್ರವೀಣ ಎಂಬುದನ್ನು ಈ ಶಿಲ್ಪ ಸ್ಪಷ್ಟಪಡಿಸುತ್ತದೆ. ಅಲ್ಲದೆ ಈ ವೀರನ ಮರಣಾನಂತರ ಆತನ ಇಬ್ಬರು ಪತ್ನಿಯರು ಸಹಗಮನ (ಮಹಾಸತಿ) ಮಾಡಿರುವುದನ್ನು ಈ ಸ್ಮಾರಕವು ಸೂಚಿಸುತ್ತದೆ.
ತೋಟದಲ್ಲಿ ಮತ್ತೊಂದು ಮಾಸ್ತಿ ಕಲ್ಲು ಹಾಗೂ ಭಗ್ನಗೊಂಡಿರುವ ಶಾಸನವೊಂದು ಪತ್ತೆಯಾಗಿದೆ. ಯುದ್ಧದಲ್ಲಿ ಮಡಿದ ವೀರನ ಸ್ಮರಣಾರ್ಥ ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖ ಈ ಶಾಸನದಲ್ಲಿದೆ. ಶಿಲೆಯ ಹೆಚ್ಚಿನ ಭಾಗ ಹಾನಿಗೀಡಾಗಿದ್ದು, ಪೂರ್ಣ ವಿವರ ಲಭ್ಯವಾಗಿಲ್ಲ. ಇವು ವಿಜಯನಗರ ಕಾಲಕ್ಕೆ ಸೇರಿದ ಮಹತ್ವದ ಕುರುಹುಗಳು ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ. ಶೇಜೇಶ್ವರ ಅಭಿಪ್ರಾಯಪಟ್ಟಿದ್ದಾರೆ.