

ಆಯನೂರು: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಆಯನೂರು ತಾಂಡಕ್ಕೆ ಹೋಗುವ ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ಕಸ ತುಂಬಿ ದುರ್ನಾತ ಬೀರುತ್ತಿದೆ. ಸಾಲದೆಂಬಂತೆ ಸೊಳ್ಳೆಗಳು, ನಾಯಿ ಮತ್ತು ಹಂದಿಗಳ ಕಾಟ ವಿಪರೀತವಾಗಿದೆ.
ಮಳೆ ಬಂದಾಗ ಚರಂಡಿ ನೀರು ರಸ್ತೆಗಳಲ್ಲಿ ಹರಿಯುತ್ತದೆ. ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಚರಂಡಿಯಲ್ಲಿ ಸಿಗುವಂತಹ ಆಹಾರಕ್ಕಾಗಿ ಹಂದಿಗಳು ಹಾಗೂ ನಾಯಿಗಳು ಕಸವನ್ನು ಎಳೆದು ರಸ್ತೆಗೆ ತರುತ್ತವೆ. ಈ ಮಾರ್ಗದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ಶಾಲಾ ಕಾಲೇಜುಗಳು ಹಾಗೂ ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿ ಕಚೇರಿಯೂ ಇದೆ. ವಾಸನೆಯಿಂದಾಗಿ ಜನರಿಗೆ ತುಂಬ ಕಿರಿಕಿರಿಯಾಗುತ್ತಿದೆ.
ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕ ಇರುವುದರಿಂದ ಆರೋಗ್ಯ ಇಲಾಖೆಯೂ ಮೌನವಾಗಿದೆ. ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ಗಂಗಾನಾಯ್ಕ, ನಾಗರಾಜನಾಯ್ಕ ದೂರಿದ್ದಾರೆ.
ಚರಂಡಿಯಲ್ಲಿ ಕಸ ತುಂಬಿರುವ ಸ್ಥಳ ಪರಿಶೀಲಿಸಿದ್ದೇನೆ. ಸ್ಥಳೀಯರೇ ಚರಂಡಿಯಲ್ಲಿ ಕಸ ಹಾಗೂ ಇತರೆ ಬೇಡವಾದ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಚರಂಡಿ ಸ್ವಚ್ಛಗೊಳಿಸುತ್ತೇವೆ. ಇನ್ಮುಂದೆ ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು. ಕಸದ ವಾಹನ ಪ್ರತಿದಿನ ಬರುವುದರಿಂದ ಹಸಿ ಮತ್ತು ಒಣ ಕಸ ವಿಂಗಡಿಸಿ ಹಾಕಬೇಕು ಎಂದು ಕೋಹಳ್ಳಿ ಪಿಡಿಒ ರುದ್ರಸ್ವಾಮಿ ತಿಳಿಸಿದ್ದಾರೆ.