ಕ್ರೀಡಾಕೂಟದಿಂದ ಸೌಹಾರ್ದ ವಾತಾವರಣ

ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭ
Cricket Tournament Closing Ceremony
ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ರೇಣುಕಪ್ರಸಾದ್, ಸೈಯದ್ ಚನ್ನಪಟ್ಟಣ, ರಾಜೀವ್, ಶರದ್ ನಾಯಕ್ ಇತರರಿದ್ದರು.
Published on: 

ಸೊರಬ: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಂತ ಸಹಕಾರಿ. ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆ ಎಂದು ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಎಂ.ಬಿ.ರೇಣುಕಪ್ರಸಾದ್ ಹೇಳಿದರು.

ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ರೇಣುಕಾಂಬ ಕ್ರಿಕೆಟರ್ಸ್‌ ಹಾಗೂ ಗರುಡ ಪಡೆ ಆಶ್ರಯದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಒತ್ತಡದ ಬದುಕಿನಲ್ಲಿ ಯುವಜನತೆ ಮೊಬೈಲ್ ಗೀಳು ಮತ್ತು ದುಶ್ಚಟಗಳಿಂದ ದೂರವಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದರು.

ವಕೀಲ ಸೈಯದ್ ಚನ್ನಪಟ್ಟಣ ಮಾತನಾಡಿ, ಕ್ರೀಡೆಯು ಜಾತಿ, ಮತ, ಧರ್ಮ ಭೇದವಿಲ್ಲದೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟು ಮೂಡಿಸುವ ಶಕ್ತಿ ಹೊಂದಿದೆ. ಕ್ರೀಡಾಂಗಣದಲ್ಲಿ ನಿಯಮಗಳನ್ನು ಗೌರವಿಸಿ ಆಡುವ ಶಿಸ್ತು ನಮ್ಮ ದೈನಂದಿನ ಬದುಕಿನಲ್ಲೂ, ಕಾನೂನು ಮತ್ತು ನಾಗರಿಕ ಪ್ರಜ್ಞೆಯಲ್ಲೂ ಕಾಣಬೇಕು. ಯುವ ಸಮುದಾಯವು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅಪರಾಧ ಚಟುವಟಿಕೆಗಳು ಮತ್ತು ಅಶಿಸ್ತಿನಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.

ಶಿರಸಿ ತಂಡ ಪ್ರಥಮ ಸ್ಥಾನ ಪಡೆಯಿತು. ಬಿ.ಕೆ.ಬ್ರದರ್ಸ್‌ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಾಜೀವ್, ಶರದ್ ನಾಯಕ್, ಪರಶುರಾಮ್, ಧನುಷ್, ಪುರುಷೋತ್ತಮ, ಆನಂದ, ದಿವಾಕರ್, ಗೌತಮ್, ಶಶಾಂಕ, ಶ್ರೀಧರ, ಹರೀಶ್ ಇತರರಿದ್ದರು.