

ಸಾಗರ: ಶೃಂಗೇರಿ ಶಂಕರಮಠವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಶರನ್ನವರಾತ್ರಿ ಸಂದರ್ಭ ಮಠದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಾಗರದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ನವರಾತ್ರಿ ಅಂಗವಾಗಿ ಸಾಗರದ ಶೃಂಗೇರಿ ಶಂಕರಮಠದಿಂದ ಭಾರತೀ ತೀರ್ಥ ಸಭಾಭವನದಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಶಾರದಾ ಪ್ರಸಾದಮ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಗರ ಶೃಂಗೇರಿ ಶಂಕರಮಠಕ್ಕೆ 25 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಗಾಂಧಿನಗರ ವೃತ್ತ ಹಾಗೂ ಮಠದ ಸಮೀಪದ ಗಣಪತಿ ಕೆರೆ ಮೇಲ್ಭಾಗದ ವೃತ್ತದಲ್ಲಿ ಮಹಾದ್ವಾರ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಕಾರ್ಯಯೋಜನೆ ಆರಂಭಿಸಲಾಗಿದೆ ಎಂದರು
ಪ್ರತಿವರ್ಷ ನವರಾತ್ರಿ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ಮೂಲಕ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿದಿನ ವಿಶೇಷ ಹೋಮ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.
ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾಗರಾಜ್, ಸಾಮಾಜಿಕ ಕಾರ್ಯಕರ್ತ ಮುಕುಂದ ಬಾಪಟ್, ಪಾಕಪ್ರವೀಣೆ ಭಾಗೀರಥಿ ಮುರಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರೊ. ಕೆ.ಆರ್.ಕೃಷ್ಣಯ್ಯ, ಮಾ.ಸ.ನಂಜುಂಡಸ್ವಾಮಿ, ಎಚ್.ಜಿ.ಸುಬ್ರಹ್ಮಣ್ಯ ಭಟ್, ರಾಜಶ್ರೀ, ಪ್ರಭಾವತಿ, ಸವಿತಾ ಕಾನುಗೋಡು ಇತರರಿದ್ದರು.