ಬೆಂಗಳೂರು: (Show-cause notice issued to Health Department official) ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಸಲ್ಲಿಸಿ ಕೆಳಹಂತದ ಸಿಬ್ಬಂದಿಯ ವೇತನ ಮತ್ತು ವರ್ಗಾವಣೆ ಅಕ್ರಮದ ತನಿಖಾ ವರದಿ ಕೋರಿದ್ದರೂ ನಿಗದಿತ ಸಮಯಕ್ಕೆ ಮಾಹಿತಿ ಒದಗಿಸದೆ ವಿಳಂಬ ಧೋರಣೆ ಅನುಸರಿಸಿದ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ ರಮೇಶ್ ನಾಯಕ್ ಅವರನ್ನು ಕರ್ನಾಟಕ ಮಾಹಿತಿ ಆಯೋಗ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕಾಯ್ದೆ ಉಲ್ಲಂಘನೆ ಹಿನ್ನೆಲೆ ಅಧಿಕಾರಿ ವಿರುದ್ಧ 25 ಸಾವಿರ ರೂ. ದಂಡ ಏಕೆ ವಿಧಿಸಬಾರದು? ಎಂದ ಆಯೋಗ, ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಬೆಳಗಾವಿಯ ಆಂಜನೇಯ ನಗರದ ನಿವಾಸಿ ಎಸ್.ಜಗದೀಶ್ ಎಂಬುವರು 2025ರ ಡಿ.10 ರಂದು ಮಾಹಿತಿ ಹಕ್ಕು ಕಾಯ್ದೆ ಕಲಂ 6(1) ರಡಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರ ವಿಭಾಗದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಚ್.ಡಿ.ಶರತ್ ಬಾಬು,2023ರಲ್ಲಿ ವರ್ಗಾವಣೆಯಾದ ಸಂದರ್ಭದಲ್ಲಿ ಆಯುಕ್ತರ ಅನುಮೋದನೆ ಇಲ್ಲದೆ ವೇತನ ಪಡೆದಿರುವುದು, ಖಾಯಂ ಮತ್ತು ಗುತ್ತಿಗೆ ಸಿಬ್ಬಂದಿಗೆ ಕಾಲಕಾಲಕ್ಕೆ ವೇತನ ಪಾವತಿಸದಿರುವ ದೂರಿನ ಮೇಲಿನ ತನಿಖಾ ವರದಿಯ ಮಾಹಿತಿಯನ್ನು ಅರ್ಜಿದಾರರು ಕೋರಿದ್ದರು.
ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿ ನಿಗದಿತ ಸಮಯದೊಳಗೆ ಮಾಹಿತಿ ನೀಡದ ಕಾರಣ, ಅರ್ಜಿದಾರರು 2026ರ ಜ.12ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲೂ ಸಹ ಮಾಹಿತಿ ದೊರೆಯದಿದ್ದಾಗ 2026ರ ಮಾ.12ರಂದು ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಿದರು.
ರಾಜ್ಯ ಮಾಹಿತಿ ಆಯುಕ್ತ ಡಾ. ಮಹೇಶ ವಾಲ್ವೇಕರ್ ಪೀಠದಲ್ಲಿ ಈ ಪ್ರಕರಣ ಬಗ್ಗೆ ವಿಚಾರಣೆ ನಡೆಯಿತು. ವಿಚಾರಣೆಗೆ ಪ್ರತಿವಾದಿ ರಮೇಶ್ ನಾಯಕ್ ಖುದ್ದು ಹಾಜರಾಗಿದ್ದರೂ ಅರ್ಜಿದಾರರಿಗೆ ಮಾಹಿತಿ ಒದಗಿಸಿದ ಬಗ್ಗೆ ಯಾವುದೇ ಲಿಖಿತ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಆಯೋಗದ ವಿಚಾರಣೆಗೆ ಗೈರುಹಾಜರಾಗಿತ್ತು.ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, 10 ದಿನದೊಳಗೆ ಮೇಲ್ಮನವಿದಾರರಿಗೆ ಉಚಿತವಾಗಿ ನೋಂದಾಯಿತ ಅಂಚೆ ಮುಖಾಂತರ ದೃಢೀಕೃತ ಮಾಹಿತಿ ಒದಗಿಸಬೇಕು. ಕಳುಹಿಸಿದ ಅಂಚೆ ಸ್ವೀಕೃತಿ ಪ್ರತಿಯೊಂದಿಗೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ರಮೇಶ್ ನಾಯಕ್‌ಗೆ ನಿರ್ದೇಶಿಸಿದೆ.
ಮುಂದಿನ ವಿಚಾರಣೆಯೊಳಗೆ ಸೂಕ್ತ ಕಾರಣ ಮತ್ತು ಪೂರಕ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಪ್ರಕರಣವನ್ನು ಅರ್ಹತೆ ಆಧಾರದ ಮೇಲೆ ತೀರ್ಮಾನಿಸುವುದಾಗಿ ಆಯೋಗ ಎಚ್ಚರಿಕೆ ಕೊಟ್ಟಿದೆ.