ತಂತ್ರಜ್ಞಾನದ ಏಕಸ್ವಾಮ್ಯತ್ವ ಸಮಾಜಕ್ಕೆ ಅಪಾಯಕಾರಿ

04 HHR P 05 (2)
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕು ಕಾರ್ಯಾಗಾರದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕೆ.ಆರ್.ಪ್ರತಿಭಾ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಾ. ಅರುಂಧತಿ, ಶಂಕರ್ ಇತರರಿದ್ದರು.
Published on

ಹೊಳೆಹೊನ್ನೂರು: ಆಧುನಿಕ ಯುಗದಲ್ಲಿ ತಂತ್ರಜ್ಞಾನ ಒಬ್ಬ ವ್ಯಕ್ತಿಯ ಸ್ವತ್ತಾಗುವುದು ಸಮಾಜಕ್ಕೆ ಮಾರಕ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವಿಭಾಗದಿಂದ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕು ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯಿಂದ ನಿಜರೂಪಗಳಿಗೆ ಬೆಲೆ ಇಲ್ಲವಾಗುತ್ತಿದೆ. ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆ ಸಹಾಯ ಪಡೆಯಬೇಕೇ ವಿನಃ ಕೃತಕ ಬುದ್ಧಿಮತ್ತೆಯನ್ನು ತಂತ್ರಜ್ಞಾನ ಎಂದು ಪರಿಗಣಿಸಬಾರದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತೊಬ್ಬರ ಸ್ವತ್ತಾಗುತ್ತಿರುವುದು ದೇಶದ ಪ್ರಗತಿಗೆ ಅಡ್ಡಿಯಾಗಲಿದೆ. ಕೈಗಾರಿಕಾ ವಲಯಗಳ ಉತ್ಪಾದನೆಗಳಲ್ಲಿ ಪೆಟೆಂಟ್ ಭೂತ ಕಾಡುತ್ತಿದ್ದು, ಬೌದ್ಧಿಕತೆಗೆ ಪೆಟೆಂಟ್ ಪಡೆಯುವ ಮಟ್ಟಕ್ಕೆ ಬಂದು ನಿಂತಿದೆ. ಕಲಾತ್ಮಕ ಸೃಷ್ಟಿಗೆ ಮನ್ನಣೆ ದೊರೆಯಬೇಕು. ಡಿಜಿಟಲ್ ಯುಗದಲ್ಲಿ ಅಸಾಧ್ಯ ಎನ್ನುವುದು ಇಲ್ಲ. ಕಲೆಯನ್ನು ಸ್ವೀಕಾರ ಮಾಡುವ ಭಾವ ಹಾಗೂ ವಸ್ತುವಿನ ಲಭ್ಯತೆ ದೃಷ್ಟಿಯಿಂದ ತಂತ್ರಜ್ಞಾನ ಅತ್ಯವಶ್ಯ ಎಂದರು.

ವೈಜ್ಞಾನಿಕ ಕ್ಷೇತ್ರ ಸೇರಿ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಬೆಳವಣಿಗೆ ಆಗುತ್ತಿರುವುದು ಆಶಾದಾಯಕ. ಮನಸ್ಸಿನ ಗೊಂದಲಗಳೇ ಮುಂದಿನ ಹೆಜ್ಜೆಗೆ ಸಹಕಾರಿ. ಗೊಂದಲವಿಲ್ಲದ ಮನಸಿನಲ್ಲಿ ಹೊಸ ಆವಿಷ್ಕಾರಗಳು ಮೂಡುವುದು ಅಸಾಧ್ಯ. ಪ್ರೊ. ಶರತ್ ಅನಂತಮೂರ್ತಿ ಕುವೆಂಪು ವಿವಿ ಕುಲಸಚಿವ

ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, 21ನೇ ಶತಮಾನವನ್ನು ತಂತ್ರಜ್ಞಾನ ಯುಗ ಎಂದರೆ ತಪ್ಪಾಗಲಾರದು. ಬೌದ್ಧಿಕತೆಯನ್ನು ಆಸ್ತಿಯಾಗಿ ಮಾರ್ಪಡಿಸಿ ಪೆಟೆಂಟ್ ಪಡೆಯುವುದು ಜನಜೀವನಕ್ಕೆ ಮಾರಕ. ಉತ್ಪಾದಕ ಕೇಂದ್ರಿತ ವಿದೇಶಿ ಪೆಟೆಂಟ್‌ಗಳ ನೀತಿಗಳಿಗಿಂತ ಗ್ರಾಹಕ ಹಿತರಕ್ಷಣೆಯ ದೇಶೀಯ ಪೆಟೆಂಟ್ ನೀತಿ ಜನಾನುರಾಗಿ. ಭಾರತ ಜಾಗತಿಕ ಮಟ್ಟದಲ್ಲಿ ಜನರಿಕ್ ಔಷಧದಲ್ಲಿ ಸ್ವಾಮ್ಯತೆ ಪಡೆದಿದೆ ಎಂದು ಹೇಳಿದರು.

ಕೆಲ ದೇಶಗಳು ಭಾರತವನ್ನು ಆಯುರ್ವೇದದ ಪಿತಾಮಹ ಎನ್ನುವುದನ್ನು ಒಪ್ಪದ ಸ್ಥಿತಿಗೆ ಬಂದು ನಿಂತಿವೆ. ಆಯುರ್ವೇದ ಪದ್ಧತಿಯನ್ನು ಅಲ್ಲಗಳೆಯುತ್ತಿವೆ. ಕೆಲ ವಿದೇಶಿ ಕಂಪನಿಗಳು ಬೇವು, ಅರಿಶಿಣ ಬಳಸಿದ ಉತ್ಪನ್ನಗಳಿಗೂ ಪೆಟೆಂಟ್ ಪಡೆಯುತ್ತಿವೆ. ಡಾ. ಕೆ.ಆರ್.ಪ್ರತಿಭಾ ಪದವಿ ಕಾಲೇಜು ಪ್ರಾಚಾರ್ಯೆ, ಹೊಳೆಹೊನ್ನೂರು

ಭಾರತದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಬೌದ್ಧಿಕ ಆಸ್ತಿ ಮತ್ತು ಸಂಶೋಧನೆಗಳ ಬಗ್ಗೆ ಕಾರ್ಯಗಾರದಲ್ಲಿ ಚರ್ಚೆಯಾದವು. ಸಹ ಪ್ರಾಧ್ಯಾಪಕಿ ಡಾ. ಅರುಂಧತಿ, ಐಕ್ಯೂಎಸಿ ಸಂಚಾಲಕಿ ಡಾ. ಭಾರತಿ ದೇವಿ, ಸಾಧ್ವಿ ಸಿ. ಕಾಂತ್, ಡಾ. ಆಸ್ಮಾ ಮೇಲಿನಮನಿ, ಶಂಕರ್, ಡಾ. ಛಾಯಾಶ್ರೀ, ಸುರೇಶ್ ಸಾಗರ್, ರಾಜು ನಾಯ್ಕ, ರುದ್ರಮುನಿ, ಸಂಗೀತಾ ಬಗಲಿ, ಜಿ.ಎಸ್ ತ್ರಿಶೂಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net