ಗುರುವಿನ ಮಾರ್ಗದರ್ಶನ ಅವಶ್ಯ

14sor2
ಸೊರಬದ ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವೈದ್ಯ ಎಂ.ಕೆ.ಭಟ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ರೇವಣಪ್ಪ ಬಿದರಗೇರಿ, ರೇಖಾ ಜಗದೀಶ್ ಇತರರಿದ್ದರು.
Published on

ಸೊರಬ: ಜನರಲ್ಲಿ ಆಧ್ಯಾತ್ಮಿಕ ಆಲೋಚನೆ ಮೂಡಿಸುವಲ್ಲಿ ಧಾರ್ಮಿಕ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು. ಜೀವನದಲ್ಲಿ ಗುರುವಿನ ಮಾರ್ಗದರ್ಶನ ಬೇಕು. ಜನರಲ್ಲಿ ಸಂಸ್ಕೃತಿ, ಸಂಸ್ಕಾರ ರೂಪುಗೊಳ್ಳಲು ಗುರುವಿನ ಪ್ರೇರಣೆ ಅಗತ್ಯ. ಶರಣರು ವಚನಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಎಂ.ಕೆ.ಭಟ್ ಮಾತನಾಡಿ, ವಚನಗಳು ಸಾಹಿತ್ಯದ ಆಧಾರ ಸ್ತಂಭಗಳು. ಬಸವಣ್ಣ ಅವರು ವಚನಗಳಲ್ಲಿ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಒಪ್ಪಿಕೊಳ್ಳುವಂತವು. ವಚನಗಳು ಧರ್ಮ, ದೇವರು, ದೇಶ ಕಟ್ಟಲು ಬೇಕಾದ ಪೂರಕ ಚಿಂತನೆ ಬಿತ್ತುತ್ತವೆ. ಬಸವಣ್ಣ ಅವರ ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣರ ಚಿಂತನೆಗಳು ಸಮಸಮಾಜದ ಉದ್ದೇಶಗಳನ್ನು ಹೊಂದಿದ್ದು, ವೀರಶೈವ ಧರ್ಮವು ಸಮಾನತೆ ಮತ್ತು ಜಾತ್ಯತೀತದಿಂದ ಕೂಡಿದ್ದು, ಶಿವಶರಣರು ಸಮಾಜದ ಒಳಿತು ಬಯಸಿದ್ದರು ಎಂದು ಹೇಳಿದರು.

ಸಾಹಿತಿ ರೇವಣಪ್ಪ ಬಿದರಗೇರಿ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಬಸವಕಲ್ಯಾಣದ ಶ್ರೀ ಬಸವ ಶಿವಾಚಾರ್ಯ ಸ್ವಾಮೀಜಿ, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಎಸ್.ಎಸ್.ಸುಂಕದ್, ಡಿ.ಶಿವಯೋಗಿ, ಮಂಜುನಾಥ್ ಹೊಸಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net