ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಾ. ರಶ್ಮಿ ಪರಮೇಶ್ವರ್

23 smg 2
Published on

ಶಿವಮೊಗ್ಗ: ಯಾವುದೇ ಕ್ಷೇತ್ರವಾದರೂ ಪರಿಶ್ರಮ ಇಲ್ಲದಿದ್ದರೆ ಫಲ ಸಿಗುವುದಿಲ್ಲ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಅರವಳಿಕೆ ತಜ್ಞೆ ಡಾ. ರಶ್ಮಿ ಪರಮೇಶ್ವರ್ ಹೇಳಿದರು.

ನಗರದ ಈಡಿಗರ ಭವನದಲ್ಲಿ ಶನಿವಾರ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಆರ್ಯ ಈಡಿಗ ಮಹಿಳಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸು ಸಿಗುವವರೆಗೂ ಮಿರಮಿಸಬಾರದು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳು. ಅದಾದ ಬಳಿಕ ಯಾವುದೇ ಕೋರ್ಸ್ ತೆಗೆದುಕೊಳ್ಳುವ ಮೊದಲು ಕೂಲಂಕಶವಾಗಿ ಆಲೋಚಿಸಬೇಕು. ಪಾಲಕರು, ಪರಿಣಿತರೊಂದಿಗೆ ಸಮಾಲೋಚಿಸಬೇಕು. ತನ್ನ ಸ್ನೇಹಿತ ಅಥವಾ ಸ್ನೇಹಿತೆ ಯಾವುದೋ ಕೋರ್ಸ್‌ಗೆ ಸೇರಿದ್ದಾರೆ ಎಂಬ ಕಾರಣಕ್ಕೆ ತಾವು ಅದೇ ಕೋರ್ಸ್ ಆಯ್ದುಕೊಳ್ಳುವುದು ಒಳ್ಳೆಯದಲ್ಲ. ಪ್ರಸ್ತುತ ಒಳ್ಳೆಯ ಕೋರ್ಸ್‌ಗಳಿವೆ. ಕುಳಿತು ಸಮಾಧಾನದಿಂದ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಪ್ರಸ್ತಾವಿಕವಾಗಿ ಮಾತನಾಡಿದರು. ಹಸೆ ಚಿತ್ತಾರ ಕಲಾವಿದೆ ಲಕ್ಷ್ಮೀ ರಾಮಪ್ಪ, ಜನಪದ ಕಲಾವಿದೆ ಡಾ. ಜಯಲಕ್ಷ್ಮೀ ನಾರಾಯಣಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ತನುಜಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉಪನ್ಯಾಸಕಿ ಪ್ರತಿಭಾ ರವಿಕುಮಾರ್, ಗೌರವಾಧ್ಯಕ್ಷೆ ರೀತಾ ಪೂಜಾರಿ, ಉಪಾಧ್ಯಕ್ಷರಾದ ಸಾವಿತ್ರಮ್ಮ ಕೆಜಿ ಶಿವಪ್ಪ, ಲಲಿತಾ ಹೊನ್ನಪ್ಪ, ಪ್ರೇಮಾ ವಿಜೇಂದ್ರ, ಕಾರ್ಯದರ್ಶಿ ಸರಸ ಮಹಾದೇವಪ್ಪ, ಸಹ ಕಾರ್ಯದರ್ಶಿ ಲಲಿತಾ ಪದ್ಮನಾಭ, ಖಜಾಂಚಿ ವೀಣಾ ವೆಂಕಟೇಶ್, ನಿರ್ದೇಶಕರಾದ ಜಯಲಕ್ಷ್ಮೀ ಕಲ್ಲನ, ಪ್ರೇಮಾ ಚಂದ್ರಶೇಖರ್, ಪ್ರಭಾ ಹೊಳಲೂರು, ಜ್ಯೋತಿ ಸಂಜೀವ್, ಜಯಲಕ್ಷ್ಮೀ, ರೇಷ್ಮಾ, ಸರ್ವಮಂಗಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net