

ಬಾಗಲಕೋಟೆ: ಯಾವುದೇ ವೃತ್ತಿಯಾಗಲಿ ಅದರಲ್ಲಿ ದೇವರನ್ನು ಕಾಣುವ ಮನೋಭಾವ ಪುನರಾವರ್ತೆನೆಯಾಗಬೇಕು. ಕಾಯಕವೇ ಕೈಲಾಸ ಎಂದಾದಲ್ಲಿ ಮಾತ್ರ ಸಮಾಜ ಸುಭಿಕ್ಷವಾಗಿರುತ್ತದೆ. ಶರಣರ ಸಂದೇಶಗಳು ಸಾರ್ವಕಾಲಿಕವಾಗಿ ಶಾಶ್ವತವಾಗಿವೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ 12ನೇ ಶತಮಾನದ ಶ್ರೇಷ್ಠ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ವತ್ತಿಗೆ ಜ್ಞಾನ, ಸಂಪತ್ತಿಗೆ ಜಾತಿ ಆಧಾರವಲ್ಲ, ಅದು ಜಾತಿ ಎಲ್ಲೆ ಮೀರಿ ಬೆಳೆಯಬಹುದು. ಯಾವುದೇ ವೃತ್ತಿಯಾದರೂ ಅದರ ಬಗ್ಗೆ ಕಿಳರಿಮೆ ಹೊಂದದೆ ಅಭಿಮಾನವಿರಬೇಕು. ಈ ಬಗ್ಗೆ ಅಂಬಿಗರ ಚೌಡಯ್ಯ ಅವರನ್ನು ನೋಡಿ ಕಲಿಯಬೇಕು. ಅಂಬಿಗ ವೃತ್ತಿ ಮಾಡುತ್ತಿದ್ದರೂ ತನ್ನ ಜ್ಞಾಠ ದೀವಿಗೆಯಿಂದ ಜಗತ್ತಿಗೆ ದಿಗ್ದರ್ಶನ ಮಾಡಿದ ನಿಜ ಶಿವಶರಣ ಅವರಾಗಿದ್ದರು. ಶರಣರು ರಚಿಸಿದ ಅಂದಾಜು 12 ಸಾವಿರ ವಚನ ಸಾಹಿತ್ಯಗಳಲ್ಲಿ ಬಹಳಷ್ಟು ಕಳೆದುಕೊಂಡಿವೆ. ಈಗ ಉಳಿದಿರುವ ವಚನಗಳನ್ನು ಕಾಪಾಡುವ ಕೆಲಸವಾಗಬೇಕಾಗಿದೆ ಎಂದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿ, ಸಮಾಜಕ್ಕೆ ಶಿವಶರಣರ ಕೊಡುಗೆ ಅಪಾರವಿದೆ. ಇದನ್ನು ಎಲ್ಲರೂ ಅರಿತುಕೊಂಡು ಸಮ ಸಮಾಜದೆಡೆಗೆ ಮುನ್ನೆಡೆಯಬೇಕಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ತಹಸೀಲ್ದಾರ ಅಮರೇಶ ಪಮ್ಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ, ಸಮುದಾಯದ ಮುಖಂಡರಾದ ಸಂಗಣ್ಣ ತಿಮ್ಮಣ್ಣವರ, ಯಲ್ಲಪ್ಪ ಅಂಬಿಗೇರ, ಮರಿಯಪ್ಪ ಕಟ್ಟಿಮನಿ, ಹಣಮಂತ ಗಣಿ, ಹಣಮಂತ ಅಂಬಿಗೇರ, ಬಾಲಪ್ಪ ಬೆನ್ನಪ್ಪನವರ, ಗುರುಲಿಂಗಪ್ಪ ಸಿಕ್ಕೇರಿ, ಬಸಪ್ಪ ಮಾಗಿ ಹಾಗೂ ಇತರರು ಉಪಸ್ಥಿತರಿದ್ದರು.