ಪಡಿತರ ವಿತರಣೆಗೆ ಸರ್ವರ್ ಕಂಟಕ

ರಾಜ್ಯದ ಹಲವೆಡ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷ ವ್ಯಾಪಕವಾಗಿದ್ದು, ಪಡಿತರ ಪಡೆಯಲು ಫಲಾನುಭವಿಗಳು ಪರದಾಡುವಂತಾಗಿದೆ.
server
ಬೆರಳಚ್ಚು folder
Published on: 

ಬೆಂಗಳೂರು: ರಾಜ್ಯದ ಹಲವೆಡ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷ ವ್ಯಾಪಕವಾಗಿದ್ದು, ಪಡಿತರ ಪಡೆಯಲು ಫಲಾನುಭವಿಗಳು ಪರದಾಡುವಂತಾಗಿದೆ.

ಇಡೀ ದಿನ ಸರದಿ ಸಾಲಿನಲ್ಲಿ ಸಾಗಿದರೂ 10-20 ಕಾರ್ಡ್‌ಗಳ ಬೆರಳಚ್ಚು ತೆಗೆದುಕೊಳ್ಳುತ್ತಿದೆ. ಹೀಗಾಗಿ, ನ್ಯಾಯಬೆಲೆ ಅಂಗಡಿ ವಾಲೀಕರು ಸರ್ವರ್ ಸಮಸ್ಯೆಯಿದೆ. ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. 2 ದಿನದೊಳಗೆ ಸರ್ವರ್ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ನ್ಯಾಯಬೆಲೆ ಅಂಗಡಿಗಳ ವಾಲೀಕರು, ಆಹಾರ ಇಲಾಖೆಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಬೆರಳಚ್ಚು ದೃಢೀಕರಣ ಹಾಗೂ ಇ ಪೋಸ್ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ಪದೇಪದೆ ವ್ಯತ್ಯಯ ಉಂಟಾಗುತ್ತಿರುವುದರಿಂದ ವಿತರಣೆ ಪ್ರಕ್ರಿಯೆ ನಿಧಾನಗತಿಯಲ್ಲಿಸಾಗುತ್ತಿದೆ. ಇಕೆವೈಸಿ ಪ್ರಕ್ರಿಯೆ ಮತ್ತು ಪಡಿತರ ವಿತರಣೆ ಏಕಕಾಲದಲ್ಲಿ ನಡೆಯುವ ಸಂದರ್ಭಗಳಲ್ಲಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ಕೆಲವು ಫಲಾನುಭವಿಗಳ ಬೆರಳಚ್ಚು ಸರಿಯಾಗಿ ಹೊಂದಾಣಿಕೆಯಾಗದ ಕಾರಣ ಬಯೋಮೆಟ್ರಿಕ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಂದೇ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸುವಾಗ ಸಂಪರ್ಕ ಕಡಿತಗೊಳ್ಳುವ ಸಮಸ್ಯೆ ಎದುರಾಗುತ್ತಿದೆ.

ಕೆಲವೇ ನಿಮಿಷಗಳಲ್ಲಿ ಸಿಗುತ್ತಿದ್ದ ಪಡಿತರಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಕೂಲಿ ಕೆಲಸ ಬಿಟ್ಟು ಬರುವ ಬಡವರು ಮತ್ತು ಹಿರಿಯ ನಾಗರಿಕರು ಪದೇಪದೆ ಅಂಗಡಿಗಳಿಗೆ ಅಲೆದಾಡುವಂತಾಗಿದೆ. ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಬೆರಳಚ್ಚು ಸಮಸ್ಯೆ ಇರುವವರಿಗೆ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಸಾರ್ವಜನಿಕರು ಆಹಾರ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಬಹುತೇಕ ನ್ಯಾಯಬೆಲೆ ಅಂಗಡಿ ವಾಲೀಕರು 20ನೇ ತಾರೀಖಿನ ನಂತರವೇ ಪಡಿತರ ವಿತರಣೆ ಆರಂಭಿಸುವುದು, ಆದರೆ, ಇದೀಗ ಸರ್ವರ್ ಸಮಸ್ಯೆಯಿಂದ ಮತ್ತಷ್ಟು ವಿಳಂಬವಾಗುತ್ತಿದೆ. ತಮ್ಮ ಕೆಲಸಗಳನ್ನು ಬಿಟ್ಟು ಕಾಯುವುದೂ ಕಷ್ಟ. ಇತ್ತ ಪಡಿತರವನ್ನು ಬಿಡುವುದೂ ಕಷ್ಟವಾಗಿದೆ.