

ನವದೆಹಲಿ: ಪೌರತ್ವ ಕಾಯ್ದೆ ತಿದ್ದುಪಡಿ ಜಾರಿ ವಿರೋಧಿಸಿ ಶಾಹೀನ್ ಬಾಘ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಗು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಕೇಸು ದಾಖಲಿಸಿ ನೋಟಿಸ್ ಜಾರಿ ಮಾಡಿದೆ.
ಶಾಹೀನ್ ಬಾಘ್ನಲ್ಲಿ ಜ.30ರಂದು 4 ತಿಂಗಳ ಮಗುವನ್ನು ಪ್ರತಿಭಟನೆ ಸ್ಥಳಕ್ಕೆ ಕರೆದೊಯ್ದಿದ್ದರು. ಪ್ರತಿಭಟನೆ ಮುಗಿಸಿ ಪಾಲಕರು ಮನೆಗೆ ತೆರಳುತ್ತಿದ್ದ ವೇಳೆ ಮಗು ಮಲಗಿತ್ತು. ಈ ವೇಳೆ ಉಸಿರುಗಟ್ಟಿ ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
2019 ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಮುಂಬೈ ಬಾಲಕಿ ಜೆನ್ ಗುಣರತ್ನ ಸದಾವರ್ತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರಿಗೆ ಪತ್ರ ಬರೆದು ಮಗು ಮೃತಪಟ್ಟ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಸಂಘಟಕರು ಮಗುವಿನ ಪ್ರಾಣ ರಕ್ಷಣೆ ಮಾಡಲು ವಿಫಲರಾಗಿದ್ದಾರೆ. ಅಲ್ಲದೆ ಮಗುವಿನ ಹಕ್ಕುಗಳಿಗೂ ಕೂಡ ಧಕ್ಕೆ ಬಂದಿದೆ ಹೀಗಾಗಿ ಪ್ರತಿಭಟನೆಯಲ್ಲಿ ಮಕ್ಕಳನ್ನು ಪಾಲ್ಗೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಜೆನ್ ಗುಣರತ್ನ ಸದಾವರ್ತೆ ಅವರು ಪತ್ರ ಬರೆದಿದ್ದರು.
ಪತ್ರದ ಆಧಾರದ ಮೇಲೆ ಸುಪ್ರೀಂಕೋರ್ಟ್ ಕೇಸು ದಾಖಲಿಸಿ ನೋಟಿಸ್ ನೀಡಿದೆ.
4 ತಿಂಗಳ ಮಗು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದೆ ಎಂದು ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್ ಮಹಿಳಾ ವಕೀಲರನ್ನು ಪ್ರಶ್ನಿಸಿತು.
4 ತಿಂಗಳ ಶಿಶುವಿನಂತಹ ಅಪ್ರಾಪ್ತ ವಯಸ್ಕರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯುವುದು ಸರಿಯಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಗಮನಕ್ಕೆ ತಂದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಕ್ಕಳನ್ನು ಶಾಲೆಯಲ್ಲಿ ಪಾಕಿಸ್ತಾನಿಗಳು ಹಾಗೂ ರಾಷ್ಟ್ರ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಮಹಿಳಾ ವಕೀಲರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಈ ವಿಚಾರ ಅಪ್ರಸ್ತುತ. ಕೋರ್ಟ್ ಸಮಯ ಹಾಳು ಮಾಡಬೇಡಿ. ಕೋರ್ಟ್ ವಿಚಾರಣೆ ದಾರಿ ತಪ್ಪಲು ನಾವು ಬಿಡುವುದಿಲ್ಲ. ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್)