

ನವದೆಹಲಿ: ಶಾಹೀನ್ಬಾಘ್ನಲ್ಲಿ ಮಾಧ್ಯಮಗಳು ಇದ್ದರೆ ಸಂಧಾನ ನಡೆಸಲು ಅಲ್ಲಿಗೆ ಇನ್ನು ಮುಂದೆ ತೆರಳುವುದಿಲ್ಲ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಂಧಾನಕಾರರು ಷರತ್ತು ವಿಧಿಸಿದ್ದಾರೆ.
ಇಬ್ಬರು ಸಂಧಾನಕಾರರು ಬುಧವಾರ ಶಾಹೀನ್ಬಾಘ್ಗೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದವರ ಜತೆ ಚರ್ಚೆ ನಡೆಸಿದ್ದರು. ಈ ವೇಳೆ ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಇದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ.
ಗುರುವಾರ ಸಂಧಾನ ನಡೆಸಲು ಮತ್ತೆ ಸ್ಥಳಕ್ಕೆ ತೆರಳಿದ ಸಮಯದಲ್ಲೂ ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಇದ್ದರು. ಇದರಿಂದ ಬೇಸರಗೊಂಡ ಸಂಧಾನಕಾರರು ಮಾಧ್ಯಮ ಪ್ರತಿನಿಧಿಗಳು ಇದ್ದರೆ ಸಂಧಾನ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾಹೀನ್ಬಾಘ್ನಲ್ಲಿ 2 ತಿಂಗಳಿಂದ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದು ಇವರ ಮನವೊಲಿಸುವಂತೆ ಸುಪ್ರೀಂಕೋರ್ಟ್ ವಕೀಲ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಅವರನ್ನು ನೇಮಕ ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಕಳೆದ 2 ತಿಂಗಳಿಂದ ಶಾಹೀನ್ಬಾಘ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗಾಗಿ ರಸ್ತೆ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿರವವರೊಂದಿಗೆ ಮಾತನಾಡಿ ಮನವೊಲಿಸುವಂತೆ ಸುಪ್ರೀಂಕೋರ್ಟ್ ಸಂಧಾನಕಾರರನ್ನು ನೇಮಕ ಮಾಡಿದೆ. (ಏಜೆನ್ಸೀಸ್)