ಕಾಂಗ್ರೆಸ್ಸಿಗೇ ಫಿಟಿಂಗ್​ ಇಟ್ಟು ಸಿಧು ಟ್ವೀಟ್​: ಇತಿಹಾಸ ಕಂಡರಿಯದ ಬದಲಾವಣೆ ಮಾಡುವೆ ಎಂದ ಮಾನ್​!

sidhu
Published on

ಅಮೃತಸರ: ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಇತಿಹಾಸ ಸೃಷ್ಟಿಸಿದೆ. ಭರ್ಜರಿ ಗೆಲುವಿನ ಬಳಿಕ ಭಗವಂತ್​ ಮಾನ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಸೋಲಿನಿಂದ ತೀವ್ರವಾಗಿ ಮುಖಭಂಗ ಅನುಭವಿಸಿದರೂ ಪಂಜಾಬ್ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್ ಸಿಧು ಮಾನ್​ ಅವರನ್ನು ಶ್ಲಾಘಿಸಿದ್ದರು. ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅದರ ಬೆನ್ನಲ್ಲೇ ಟ್ವೀಟ್​ ಮಾಡಿದ್ದಾರೆ.

ಸಿಧು ಮಾಡಿರುವ ಟ್ವೀಟ್​ನಿಂದ ಕಾಂಗ್ರೆಸ್​ ಭಾರಿ ಮುಜುಗರಕ್ಕೆ ಒಳಗಾಗಿದೆ. ಏಕೆಂದರೆ ಸಿಧು ಮಾಡಿರುವ ಟ್ವೀಟ್​ನಲ್ಲಿ 'ಯಾರಿಂದಲೂ ಏನನ್ನೂ ನಿರೀಕ್ಷಿಸದ ವ್ಯಕ್ತಿ ಅತ್ಯಂತ ಸಂತೋಷವಾಗಿರುತ್ತಾನೆ. ಇದೀಗ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್​ ಅವರು ಪಂಜಾಬ್​​ನಲ್ಲಿ ಮಾಫಿಯಾ-ವಿರೋಧಿ ಯುಗದ ಅನಾವರಣ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ನಿರೀಕ್ಷೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ. ಜನಪರ ನೀತಿಗಳೊಂದಿಗೆ ಪಂಜಾಬ್ ಅನ್ನು ಪುನರುಜ್ಜೀವನದ ಹಾದಿಗೆ ವಾಪಸ್​ ತರುತ್ತಾರೆ ಎಂಬ ನಂಬಿಕೆಯಿದೆ' ಎಂದು ಸಿಧು ಹೇಳಿದ್ದಾರೆ.

ಇದರ ಅರ್ಥ ಕಾಂಗ್ರೆಸ್​ನ ಸುದೀರ್ಘ ಇತಿಹಾಸವುಳ್ಳ ಪಂಜಾಬ್​ನಲ್ಲಿ ಇಲ್ಲಿಯವರೆಗೆ ಮಾಫಿಯಾ ತಾಂಡವಾಡುತ್ತಿತ್ತು ಎಂಬ ಬಗ್ಗೆ ಸಿಧು ಪರೋಕ್ಷವಾಗಿ ಹೇಳಿದ್ದು, ಇದು ಕಾಂಗ್ರೆಸ್​ ಮುಖಂಡರ ತಲೆ ತಗ್ಗಿಸುವಂತೆ ಮಾಡಿದೆ.

ಅದೇ ಇನ್ನೊಂದೆಡೆ, ಟ್ವೀಟ್ ಮಾಡಿರುವ ಮಾನ್​, ಶೀಘ್ರದಲ್ಲೇ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಲಿದ್ದೇನೆ. ಇಂಥ ಘೋಷಣೆಯನ್ನು ಪಂಜಾಬ್​ ಇತಿಹಾಸದಲ್ಲಿಯೇ ಯಾರೂ ಮಾಡಿಲ್ಲ ಎಂದು ಹೇಳಿದ್ದಾರೆ. ಪಂಜಾಬ್​ ಜನರ ಹಿತದೃಷ್ಟಿಯಿಂದ ಇಂದು ಒಂದು ಬಹುದೊಡ್ಡ, ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು. ಇಂಥ ನಿರ್ಧಾರವನ್ನು ಪಂಜಾಬ್​ ಇತಿಹಾಸದಲ್ಲಿಯೇ ಯಾರೂ ಮಾಡಿರಲಿಲ್ಲ. ಅದೇನೆಂದು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ತಿಳಿಸಿದ್ದು, ಇದು ಮತದಾರರಿಗೆ ಭಾರಿ ಕುತೂಹಲ ಕೆರಳಿಸಿದೆ.

ಪಂಜಾಬ್​​ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 92 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net