

ರಿಪ್ಪನ್‌ಪೇಟೆ: ಸನಾತನ ಧರ್ಮ ಗ್ರಂಥಗಳಲ್ಲಿರುವ ಹಿತೋಪದೇಶಗಳು ಇಂದಿಗೂ ಪ್ರಚಲಿತದಲ್ಲಿವೆ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶರನ್ನವರಾತ್ರಿ ಅಂಗವಾಗಿ ಹೊಂಬುಜ ಜೈನಮಠದಲ್ಲಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ಸದಾಚಾರದ ಉಪದೇಶಗಳು ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಯ ನಂದಾದೀಪದಂತಿದೆ ಎಂದರು.
ಪ್ರತಿಯೊಬ್ಬರೂ ಆಧ್ಯಾತ್ಮಿಕ ಭಕ್ತಿಯಿಂದ ಪೂಜಾ ವಿಧಿಗಳಲ್ಲಿ ತ್ರಿಕರಣಪೂರ್ವಕ ಪಾಲ್ಗೊಂಡು ಜಿನನಾಮ ಸ್ತುತಿ ಮಾಡುವುದರಿಂದ ಅಂತರಂಗದಲ್ಲಿ ಚೈತನ್ಯ ಉಂಟಾಗುವುದು. ಜೈನಾಗಮ ಪದ್ಧತಿಯು ಸಮಾಜದ ಸಂಕಟ ನಿವಾರಣೆಯ ಪಥವನ್ನು ಸಾರಿದೆ. ಶಾಂತಿ ಪಥವು ನೆಮ್ಮದಿಯ ಬದುಕಿನ ಸೋಪಾನ ಎಂದು ಹೇಳಿದರು.
ಶ್ರೀ ಪದ್ಮಾವತಿ ದೇವಿಯನ್ನು ಬಳೆಗಳಿಂದ ಅಲಂಕರಿಸಲಾಗಿತ್ತು. ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆದವು. ರಾತ್ರಿ ಅಷ್ಟಾವಧಾನ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು.