

ಸೊರಬ: ರಾಜ್ಯದಲ್ಲಿ ರೈತರ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ನೋಂದಣಿ ಆಗಿರುವ ವರದಿ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಂದ್ರ ನಾಯಕರ ಗಮನಕ್ಕೆ ತರಲಾಗಿದೆ. ವರಿಷ್ಠರು ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ ಕಲ್ಪಿಸಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾದರೆ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ರಾಜಕೀಯ ಜೀವನದಲ್ಲಿ ರೈತರು ಹಾಗೂ ಜನಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸಿದ್ದು, ಹಿಂದುಳಿದ ಸಮುದಾಯದ ಪ್ರಬಲ ನಾಯಕನಾಗಿ ಗುರುತಿಸಿಕೊಳ್ಳುವಲ್ಲಿ ಜನರ ಆಶೀರ್ವಾದ ಇದೆ ಎಂದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರೊಂದಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವಿದೆ. ಇದರ ಅನುಭವ ನನಗೂ ಆಗಿದೆ. ಅವರ ಕಾರ್ಯವೈಖರಿ ಬಗ್ಗೆ ಬಹುತೇಕ ನಾಯಕರಿಗೆ ಅಸಾಮಾಧಾನವಿದೆ. ಪಕ್ಷದ ಚೌಕಟ್ಟಿನಡಿಯಲ್ಲಿ ಕೇಂದ್ರ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಒಂದೊಮ್ಮೆ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರೆ ಸಮರ್ಥವಾಗಿ ನಿಭಾಯಿಸಲು ಉತ್ಸುಕನಾಗಿರುವೆ ಎಂದು ತಿಳಿಸಿದರು.
ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಬಗ್ಗೆ ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿ, ಆಗಿರುವ ಲೋಪದ ಬಗ್ಗೆ ವಿಸ್ತೃತ ವರದಿ ಪಡೆದು ಪಕ್ಷದ ವರಿಷ್ಠರಿಗೆ ನೀಡಲಾಗಿದೆ. ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಕರ್ನಾಟಕ ವಕ್ಫ್ ಹೋರಾಟವನ್ನು ಮಾದರಿಯಾಗಿಟ್ಟುಕೊಂಡು ವಕ್ಫ್ ಮಸೂದೆ ಜಾರಿ ತರುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದ್ವೇಷದ ರಾಜಕಾರಣಕ್ಕೆ ಒತ್ತು ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಮರೆತಂತಿದೆ. ಕ್ಷೇತ್ರವನ್ನು ನಂಜುಂಡಪ್ಪ ವರದಿಯಿಂದ ಮುಕ್ತಗೊಳಿಸಲು ತಮ್ಮ ಅವಧಿಯಲ್ಲಿ ಕೋಟ್ಯಂತರ ರೂ. ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ. ಕೆಲವು ಅಭಿವೃದ್ಧಿ ಹಂತದಲ್ಲಿದ್ದು, ವಿಸ್ತಾರ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಕಾಮಗಾರಿಗಳನ್ನು ಸ್ಥಳ ಬದಲಾವಣೆ ಮಾಡಿ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಾಗರ ತಾಲೂಕು ತಾಳಗುಪ್ಪ ಹೋಬಳಿ ಸೇರಿದಂತೆ ತಾಲೂಕಿನ 239 ಬೂತ್‌ಗಳಲ್ಲಿ ಪಕ್ಷವನ್ನು ಸಶಕ್ತಗೊಳಿಸಲು ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಯೋಜನೆ ರೂಪಿಸಲಾಗಿದೆ. ಒಂದು ವಾರ ಪ್ರವಾಸ ಹಮ್ಮಿಕೊಳ್ಳಲಾಗಿದೆ. ನಮ್ಮ ಆಪ್ತರು ಹಾಗೂ ಬಿಜೆಪಿ ಸಕ್ರಿಯ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಬೇಸರದ ಸಂಗತಿ. ಪಕ್ಷಕ್ಕೆ ಮುಜುಗರ ತಂದು ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಕಾರಣರಾದವರ ಬಗ್ಗೆ ಯಾವ ಕ್ರಮಕ್ಕೂ ಮುಂದಾಗದವರು ಇವರನ್ನು ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧ್ಯಕ್ಷರ ಜತೆ ಮಾತನಾಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಅವರೇ ಹೇಳಿಕೆ ನೀಡಲಿದ್ದಾರೆ ಎಂದರು.
ಪುರಸಭೆ ವ್ಯಾಪ್ತಿಯ ರಾಘವೇಂದ್ರ ಬಡಾವಣೆ ಸೇರಿದಂತೆ ಎಲ್ಲ ಬಡಾವಣೆಗಳಿಗೆ ಪಕ್ಷ ಸಂಘಟನೆಯ ಬೂತ್ ರಚನೆ ಮಾಡಿದರು. ಮುಖಂಡರಾದ ಗುರುಕುಮಾರ್ ಪಾಟೀಲ್, ಎಂ.ಡಿ.ಉಮೇಶ್, ಶಿವನಗೌಡ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಅಭಿಷೇಕ್, ರಂಗನಾಥ ಮೊಗವೀರ, ರಂಗಪ್ಪ ಮನವೇಲ್, ಕೃಷ್ಣಮೂರ್ತಿ ಕೊಡಕಣಿ, ಅಶೋಕ್ ಶೇಟ್, ಚಂದ್ರು, ಗುರುಮೂರ್ತಿ ಹಿರೇಶಕುನ ಇತರರಿದ್ದರು.