ನೇಪಾಳದಲ್ಲಿ ಪ್ರವಾಹದ ಅಬ್ಬರ: ಕೊಚ್ಚಿಹೋದ ಮನೆಗಳು, ತೂಗುಸೇತುವೆಗಳು ಧ್ವಂಸ! | Nepal Floods

ನೇಪಾಳದ ಗೂರ್ಖಾ ಜಿಲ್ಲೆಯ ಬುಧಿ ಗಂಡಕಿ ನದಿ ತೀರದಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ನೀರಿನ ರಭಸಕ್ಕೆ ಮನೆಗಳು ಕೊಚ್ಚಿಹೋಗಿದ್ದು, ತೂಗುಸೇತುವೆಗಳಿಗೂ ಹಾನಿಯಾಗಿದೆ. ಸದ್ಯ ಸೇನೆ ಮತ್ತು ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಮುಂದುವರಿದಿದೆ.
Nepal Floods
ನೇಪಾಳದಲ್ಲಿ ಪ್ರವಾಹದ ಅಬ್ಬರ
Published on: 

Nepal Flash Floods: ಮುಂಜಾನೆ ಎಲ್ಲರೂ ಸಿಹಿ ನಿದ್ದೆಯಲ್ಲಿದ್ದರು.. ಆವಾಗಲೇ ನದಿಯಲ್ಲಿ ಪ್ರವಾಹದ ಅಬ್ಬರ ಶುರುವಾಗಿದೆ. ಬೆಟ್ಟದಲ್ಲಿ ಉಂಟಾದ ಭೂಕುಸಿತದಿಂದ ನೇಪಾಳದ ಗೂರ್ಖಾ ಜಿಲ್ಲೆಯ ನದಿ ತೀರದ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ನೀರಿನ ರಭಸಕ್ಕೆ ಮನೆಗಳು ಕೊಚ್ಚಿಹೋಗಿದ್ದು, ತೂಗುಸೇತುವೆಗಳು ಸೇರಿದಂತೆ ಹಲವು ಮೂಲಸೌಕರ್ಯಗಳು ಹಾನಿಗೀಡಾಗಿವೆ.

ಇಂದು ಮುಂಜಾನೆ ಬುಧಿ ಗಂಡಕಿ ನದಿ ತೀರದ ಪ್ರದೇಶಗಳಲ್ಲಿ ಈ ಪ್ರವಾಹ ಸಂಭವಿಸಿದೆ. ಚುಮ್ನುಬ್ರಿ ಮತ್ತು ಧಾರ್ಚೆ ಗ್ರಾಮೀಣ ಮುನ್ಸಿಪಾಲಿಟಿ ವ್ಯಾಪ್ತಿಯ ಸಲೇರಿ ಪುಕಾ, ಜಗತ್, ನ್ಯಾಕ್‌ಚೆಟ್ ಹಾಗೂ ಫಿಲಿಮ್ ಬಜಾರ್ ಪ್ರದೇಶಗಳಲ್ಲಿ ಪ್ರವಾಹದ ಹೊಡೆತ ಜೋರಾಗಿತ್ತು.

ಭೂಕುಸಿತದಿಂದ ಏಕಾಏಕಿ ನುಗ್ಗಿದ ನೀರು

ಬೆಟ್ಟದ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದರಿಂದ ನದಿಯ ಉಪನದಿ ಅಥವಾ ಹಳ್ಳದ ನೀರಿನ ಹರಿವು ಬಂದ್ ಆಗಿತ್ತು. ಇದರಿಂದ ನೀರು ಒಂದೇ ಕಡೆ ಸಂಗ್ರಹವಾಗಿ ತಾತ್ಕಾಲಿಕ ತಡೆಯಂತಾಗಿತ್ತು. ಬಳಿಕ ಆ ತಡೆ ಏಕಾಏಕಿ ಒಡೆದಿದ್ದರಿಂದ ಭಾರೀ ಪ್ರಮಾಣದ ನೀರು ಬುಧಿ ಗಂಡಕಿ ನದಿಗೆ ನುಗ್ಗಿದೆ. ಇದರಿಂದ ನೋಡನೋಡುತ್ತಿದ್ದಂತೆಯೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಉಂಟಾಗಿದೆ.

ಬಹುತೇಕ ಹೆಚ್ಚು ಮನೆಗಳಿಗೆ ಹಾನಿ

ಪ್ರವಾಹದ ನೀರಿನ ರಭಸಕ್ಕೆ ಸಿಲುಕಿ ಬಹುತೇಕ ಮನೆಗಳು ಕೊಚ್ಚಿಹೋಗಿವೆ. ಗ್ರಾಮಗಳನ್ನು ಸಂಪರ್ಕಿಸುವ ತೂಗುಸೇತುವೆಗಳಿಗೂ ಹಾನಿಯಾಗಿದ್ದು, ಜಲವಿದ್ಯುತ್ ಯೋಜನೆಯೊಂದರ ನಿರ್ಮಾಣ ಸ್ಥಳಕ್ಕೂ ನೀರು ನುಗ್ಗಿದೆ. ಇದರಿಂದ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು ಅಸ್ತವ್ಯಸ್ತವಾಗಿದೆ.

ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮುಂಜಾನೆ ನದಿಯ ಭೀಕರ ಗರ್ಜನೆ ಕೇಳುತ್ತಿದ್ದಂತೆ ಸ್ಥಳೀಯರು ಎಚ್ಚೆತ್ತುಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ತಕ್ಷಣವೇ ಎತ್ತರದ ಮತ್ತು ಸುರಕ್ಷಿತ ಪ್ರದೇಶಗಳಿಗೆ ಓಡಿಹೋಗಿದ್ದಾರೆ. ಇದರಿಂದ ಆಸ್ತಿಪಾಸ್ತಿಗೆ ಭಾರೀ ಹಾನಿಯಾದರೂ, ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ

ಪ್ರವಾಹ ಸಂಭವಿಸಿದ ಬೆನ್ನಲ್ಲೇ ಸೇನೆ ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುವುದು, ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುವುದು ಮತ್ತು ಮತ್ತಷ್ಟು ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: ದಸರಾ ಹಬ್ಬದ ಹಿಂದೆ ಇಷ್ಟೊಂದು ಕಥೆಗಳಿವೆಯೇ? ರಾವಣನಿಂದ ಮಹಿಷಾಸುರನವರೆಗೆ, ವಿಜಯದಶಮಿಯ ರೋಚಕ ಹಿನ್ನೆಲೆ ಇಲ್ಲಿದೆ... Mysuru Dasara 2026

ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದಾಗ ನದಿಯ ನೀರಿನ ಹರಿವು ದಿಢೀರ್ ಬದಲಾಗಬಹುದು. ಇಂತಹ ಸಂದರ್ಭದಲ್ಲಿ ನೀರು ಏಕಾಏಕಿ ನುಗ್ಗಿ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ನೇಪಾಳದಲ್ಲಿ ಸಂಭವಿಸಿರುವ ಈ ಪ್ರವಾಹವೂ ಅದರ ಅಪಾಯವನ್ನು ಎತ್ತಿ ತೋರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net