Nepal floods: ಭೂಕುಸಿತದ ಬಳಿಕ ನೇಪಾಳದಲ್ಲಿ ಪ್ರವಾಹದ ಆರ್ಭಟ; ಜನರ ಬದುಕು ಅತಂತ್ರ

ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ 40ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ಐವರು ನಾಪತ್ತೆಯಾಗಿದ್ದಾರೆ. ಹೆಲಿಕಾಪ್ಟರ್ ಮೂಲಕ 95ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
 Nepal flash floods
ನೇಪಾಳದಲ್ಲಿ ಭೀಕರ ಪ್ರವಾಹದ
Published on: 

Nepal Flash Floods: ನೇಪಾಳದಲ್ಲಿ ಮತ್ತೆ ಭೂಕುಸಿತದ ಬಳಿಕ ಸಂಭವಿಸಿದ ಭೀಕರ ಆಕಸ್ಮಿಕ ಪ್ರವಾಹ ಭಾರೀ ಹಾನಿ ಉಂಟುಮಾಡಿದೆ. ಬುಢಿಗಂಡಕಿ ನದಿ ವ್ಯಾಪ್ತಿಯಲ್ಲಿ ಪ್ರವಾಹದ ರಭಸಕ್ಕೆ 40ಕ್ಕೂ ಹೆಚ್ಚು ಮನೆಗಳು ಹಾಗೂ ಜಾನುವಾರು ಕೊಟ್ಟಿಗೆಗಳು ಕೊಚ್ಚಿಹೋಗಿವೆ. ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗೂರ್ಖಾ ಜಿಲ್ಲೆಯ ಚುಮ್ಚೆಟ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮಣ್ಣು ಮತ್ತು ಬಂಡೆಗಳು ನದಿಯ ಹರಿವಿಗೆ ಅಡ್ಡಿಯಾಗಿದ್ದವು. ಇದರಿಂದ ನದಿಯಲ್ಲಿ ನೀರು ಸಂಗ್ರಹವಾಗಿ ತಾತ್ಕಾಲಿಕ ಅಣೆಕಟ್ಟಿನಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಒತ್ತಡ ಹೆಚ್ಚಾದ ಬಳಿಕ ಈ ತಡೆ ಒಡೆದು, ಭಾರೀ ಪ್ರಮಾಣದ ನೀರು, ಕೆಸರು ಮತ್ತು ಕಲ್ಲುಗಳು ನದಿಯ ಕೆಳಭಾಗಕ್ಕೆ ರಭಸವಾಗಿ ನುಗ್ಗಿವೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.

ಸೇತುವೆ, ಜಲವಿದ್ಯುತ್ ಯೋಜನೆಗೆ ಹಾನಿ

ಪ್ರವಾಹಕ್ಕೆ ಗೂರ್ಖಾ ಮತ್ತು ಧಾಡಿಂಗ್ ಜಿಲ್ಲೆಗಳನ್ನು ಸಂಪರ್ಕಿಸುವ ಆರು ಪ್ರಮುಖ ಸೇತುವೆಗಳು ಕೊಚ್ಚಿಹೋಗಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಜಲವಿದ್ಯುತ್ ಯೋಜನೆಯ ನಿರ್ಮಾಣ ಶಿಬಿರ ಮತ್ತು ಯಂತ್ರೋಪಕರಣಗಳಿಗೂ ಹಾನಿಯಾಗಿದ್ದು, ನೃಸಿಂಹಧಾಮ ಧಾರ್ಮಿಕ ಸ್ಥಳ ಜಲಾವೃತಗೊಂಡಿದೆ. ಚುಮ್ನುಬ್ರಿ ಮತ್ತು ಧಾರ್ಚೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 650ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್ ಮೂಲಕ 95ಕ್ಕೂ ಹೆಚ್ಚು ಜನರ ರಕ್ಷಣೆ

ಮೂಲಗಳ ಪ್ರಕಾರ, ಪ್ರವಾಹದ ಬಳಿಕ ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ನಾಲ್ಕು ಹೆಲಿಕಾಪ್ಟರ್‌ಗಳ ಮೂಲಕ 95ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ 9 ಮಂದಿ ವಿದೇಶಿ ಪ್ರಜೆಗಳು. ರಸ್ತೆ ಮತ್ತು ಸೇತುವೆಗಳು ಹಾನಿಗೊಳಗಾದ ಕಾರಣ 100ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಹಾಗೂ ಚಾರಣಿಗರು ವಿವಿಧ ಶಿಬಿರಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಪ್ರವಾಹದ ವೇಳೆ ಬುಢಿಗಂಡಕಿ ನದಿಯ ಮೇಲ್ಭಾಗದಲ್ಲಿ ನೀರಿನ ಮಟ್ಟ ಸುಮಾರು 20 ಮೀಟರ್ ಏರಿಕೆಯಾಗಿದ್ದು, ಆರುಘಾಟ್‌ನಲ್ಲೂ ಅಪಾಯದ ಮಟ್ಟ ಮೀರಿತ್ತು.

ಇದನ್ನೂ ಓದಿ: ಜೀನ್ಸ್ ಜೇಬಿನಲ್ಲಿರೋ ಪುಟ್ಟ ಲೋಹದ ಗುಂಡಿಗಳ ಕೆಲಸವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ | Rivets on Jeans

ಸದ್ಯ ಈ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ನದಿಯ ನೀರಿನ ಮಟ್ಟ ಸ್ವಲ್ಪ ಇಳಿದಿದೆ ಎನ್ನಲಾಗಿದೆ. ಆದರೂ ನದಿಯ ದಡದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ನಾಪತ್ತೆಯಾದವರ ಪತ್ತೆ ಹಾಗೂ ಸಿಲುಕಿರುವ ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net