ಮಗಳಿಗಾಗಿ 36 ವರ್ಷದಿಂದ ಗಂಡಿನ ವೇಷದಲ್ಲಿರುವ ಈ ತಾಯಿಯ ಕತೆ ಕೇಳಿದ್ರೆ ಕಣ್ತುಂಬಿ ಬರುತ್ತದೆ!

Mother Love
Published on

ಚೆನ್ನೈ: ಮಗಳಿಗಾಗಿ ಕಳೆದ 36 ವರ್ಷದಿಂದ 57 ವರ್ಷದ ತಾಯಿಯೊಬ್ಬಳು ಪುರುಷನ ವೇಷದಲ್ಲಿದ್ದು, ಆಕೆಯ ಕತೆ ಓದುಗರ ಮನ ಮಿಡಿಯುವಂತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ತನ್ನ ಹೆಣ್ತನವನ್ನು ಪಕ್ಕಕ್ಕಿಟ್ಟು ಮಹಾ ತ್ಯಾಗ ಮಾಡಿದ್ದಾರೆ. ಆ ಮಹಾತಾಯಿ ಸ್ಫೂರ್ತಿಯ ಕತೆ ಇಲ್ಲಿದೆ.

ಮಹಾತಾಯಿಯ ಹೆಸರು ಪೆಚ್ಚಿಯಮ್ಮಾಳ್. ಇವರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಟ್ಟುನಾಯಕಂಪಟ್ಟಿ ಗ್ರಾಮದ ನಿವಾಸಿ. ಮದುವೆಯಾದ ಬೆನ್ನಲ್ಲೇ ಪೆಚ್ಚಿಯಮ್ಮಾಳ್​ಗೆ ಜೀವನದ ಕಷ್ಟದ ಹಾದಿಗಳು ಎದುರಾದವು. ಮದುವೆಯಾದ 15 ದಿನದಲ್ಲೇ ಗಂಡ ಶಿವ ಮೃತಪಟ್ಟನು. ಆ ಸಮಯದಲ್ಲಿ ಪೆಚ್ಚಿಯಮ್ಮಾಳ್​ಗೆ ಕೇವಲ 20 ವರ್ಷ ವಯಸ್ಸಾಗಿತ್ತು. ಬೇಗನೇ ಮಗಳು ಷಣ್ಮುಗಸುಂದರಿಗೆ ಜನ್ಮ ನೀಡಿದರು.

ಒಬ್ಬಂಟಿಯಾಗಿ ಮಗುವನ್ನು ಬೆಳೆಸುವುದು ಪೆಚ್ಚಿಯಮ್ಮಾಳ್​ಗೆ ತುಂಬಾ ಕಷ್ಟಕರವಾಗಿತ್ತು ಮತ್ತು ತನ್ನ ಮಗಳ ಅವಶ್ಯಕತೆಗಳನ್ನು ಪೂರೈಸಲು ಕನ್ನಡ ನಿರ್ಮಾಣ ಸ್ಥಳಗಳು, ಹೋಟೆಲ್‌ಗಳು ಮತ್ತು ಚಹಾ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟೇ ಅಲ್ಲದೆ, ಮತ್ತೆ ಮದುವೆಯಾಗದಿರಲು ನಿರ್ಧರಿಸಿ ಇಡೀ ಜೀವನವನ್ನು ತನ್ನ ಮಗಳಿಗಾಗಿ ಮುಡುಪಾಗಿಟ್ಟಿದ್ದಾರೆ.

ಪುರುಷರ ಪ್ರಾಬಲ್ಯವಿರುವ ಈ ಎಲ್ಲಾ ಕೆಲಸದ ಸ್ಥಳಗಳಲ್ಲಿಯೂ ಪೆಚ್ಚಿಯಮ್ಮಾಳ್​ ಕಿರುಕುಳವನ್ನು ಅನುಭವಿಸಿದರು. ಒಂದು ದಿನ ಲೈಂಗಿಕ ಶೋಷಣೆಯನ್ನು ಎದುರಿಸಿದ ತಿಂಗಳುಗಳ ನಂತರ ಪೆಚ್ಚಿಯಮ್ಮಾಳ್ ಪುರುಷನಾಗಿ ಬದಲಾಗಲು ನಿರ್ಧರಿಸಿದರು. ತನ್ನ ಉಡುಪನ್ನು ಅಂಗಿ ಮತ್ತು ಲುಂಗಿಗೆ ಬದಲಾಯಿಸಿದರು ಮತ್ತು ತನ್ನನ್ನು ಮುತ್ತು ಎಂದು ಮರುನಾಮಕರಣ ಮಾಡಿಕೊಂಡರು. ಅಂದಿನಿಂದ ಇಂದಿನವರೆಗೂ ಅಂದರೆ, ಬರೋಬ್ಬರಿ 36 ವರ್ಷದಿಂದ ಪುರುಷನ ವೇಷದಲ್ಲೇ ಪೆಚ್ಚಿಯಮ್ಮಾಳ ಜೀವನ ಸಾಗಿಸುತ್ತಿದ್ದಾರೆ.

ನಾವು 20 ವರ್ಷಗಳ ಹಿಂದೆ ಕಟ್ಟುನಾಯಕಂಪಟ್ಟಿಯಲ್ಲಿ ಪುನರ್ವಸತಿ ಹೊಂದಿದ್ದೇವೆ. ಮನೆಗೆ ಬರುತ್ತಿದ್ದ ನನ್ನ ಹತ್ತಿರದ ಸಂಬಂಧಿಕರಿಗೆ ಮತ್ತು ನನ್ನ ಮಗಳಿಗೆ ಮಾತ್ರ ನಾನು ಮಹಿಳೆ ಎಂದು ತಿಳಿದಿತ್ತು ಎಂದು ಪೆಚ್ಚಿಯಮ್ಮಾಳ್​ ಹೇಳಿದ್ದಾರೆ.

ಮಗಳು ಷಣ್ಮುಗಸುಂದರಿ ಈಗ ಮದುವೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೂ ಪೆಚ್ಚಿಯಮ್ಮಾಳ್​ಗೆ ತನ್ನ ವೇಷವನ್ನು ಮೊದಲಿದ್ದಂತೆ ಬದಲಿಸಿಕೊಳ್ಳಲು ತಯಾರಿಲ್ಲ. ಈ ಗುರುತಿನ ಬದಲಾವಣೆಯು ತನ್ನ ಮಗಳಿಗೆ ಸುರಕ್ಷಿತ ಜೀವನವನ್ನು ನೀಡಿದೆ. ಹೀಗಾಗಿ ನಾನು ಶಾಶ್ವತವಾಗಿ 'ಮುತ್ತು' ಆಗಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.

ಪೆಚ್ಚಿಯಮ್ಮಾಳ್ ಇತ್ತೀಚೆಗೆ ಮಹಿಳಾ ಗುರುತಿನ ಮೇಲೆ ನರೇಗಾ ಜಾಬ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಆಕೆಯ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಪ್ರಕಾರ ಅವರಿನ್ನೂ ಪುರುಷನಾಗಿಯೇ ಉಳಿದಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net