ಸಹಭಾಗಿತ್ವದಲ್ಲಿ ಪಂಪ್ಡ್ ಸ್ಟೋರೇಜ್ ಕಾಮಗಾರಿ

kpc
ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೌರವ್ ಗುಪ್ತ, ಗೋವಿಂದರಾಜು, ಕೆ.ವೀರೇಂದ್ರ ಗೌಡ ಇತರರಿದ್ದರು.
Published on

ಕಾರ್ಗಲ್: ಸುಮಾರು 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ 1,500 ಮೆಗಾವಾಟ್ ಸಾಮರ್ಥ್ಯದ ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯನ್ನು ರಾಜ್ಯದ ಕೆಪಿಸಿ ಮತ್ತು ಕೇಂದ್ರ ಸರ್ಕಾರದ ಜಲ ವಿದ್ಯುತ್ ನಿಗಮದ ಸಹಭಾಗಿತ್ವದಲ್ಲಿ ಆರಂಭಿಸುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು ಎಂದು ಕೆಪಿಸಿ ಎಂಪ್ಲಾಯಿಸ್ ಯೂನಿಯನ್‌ನ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ ಗೌಡ ಹೇಳಿದ್ದಾರೆ.

ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಸೋಮವಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳ ನಿಯೋಗಕ್ಕೆ ಮೇಲ್ಕಂಡಂತೆ ಉತ್ತರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕೆಪಿಸಿ ನಿಗಮವು ರಾಜ್ಯದಲ್ಲಿ ಸಾಕಷ್ಟು ಡ್ಯಾಂಗಳು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೆಪಿಸಿಗೆ ವಹಿಸುವಂತೆ ಸಚಿವರನ್ನು ಕೋರಲಾಯಿತು. ಆದರೆ ಇಷ್ಟೊಂದು ದೊಡ್ಡ ಯೋಜನೆಯನ್ನು ನಿರ್ವಹಿಸುವುದು ಆರ್ಥಿಕವಾಗಿ ನಿಗಮಕ್ಕೆ ಹೊರೆಯಾಗಲಿದೆ. ಹಾಗಾಗಿ ಸಹಭಾಗಿತ್ವ ಒಳ್ಳೆಯದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಉದ್ಯೋಗಿಗಳು ವಯೋ ಮತ್ತು ಸ್ವಯಂ ನಿವೃತ್ತಿಯಾಗಿದ್ದಾರೆ. ಟೆಕ್ನೀಷಿಯನ್ಸ್, ಆಪರೇಟರ್, ಸಹಾಯಕ ಹುದ್ದೆಗಳ ನೇರ ನೇಮಕಾತಿ ಕಳೆದ 30 ವರ್ಷಗಳಿಂದ ನಡೆದಿಲ್ಲ. ನಿಗಮವು ಇದೀಗ ಸಿಬ್ಬಂದಿ ಕೊರತೆ ಎದುರಿಸುತ್ತಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಶರಾವತಿ ಯೋಜನಾ ಪ್ರದೇಶ ಸೇರಿ ಕರ್ನಾಟಕ ವಿದ್ಯುತ್ ನಿಗಮದ ರಾಜ್ಯದ ಎಲ್ಲ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ನಿಗಮದ ಕಾರ್ಮಿಕರ ಕೊರತೆ ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಗೆ ಅತ್ಯಂತ ತೊಡಕಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕೆಪಿಸಿ ನಿಗಮಕ್ಕೆ ಕನಿಷ್ಠ 1 ಸಾವಿರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಕೋಶಾಧಿಕಾರಿ ರಾಘವೇಂದ್ರ, ಸಮಿತಿಯ ಕಾನೂನು ಸಲಹೆಗಾರ ಮೈಕಲ್ ಬಿ. ರ್ನಾಂಡೀಸ್, ಯೂನಿಯನ್ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net