

ಕೋಲ್ಕತ: ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದ ಬೇಲೂರು ಮಠದಲ್ಲಿರುವ ರಾಮಕೃಷ್ಣ ಪರಮಹಂಸರ ಪ್ರತಿಮೆಗೆ ಇಂದು ಗೌರವ ಸಮರ್ಪಸಿದರು.
ಭಾನುವಾರ ಬೆಳಗ್ಗೆ ಹೌರಾದಲ್ಲಿರುವ ರಾಮಕೃಷ್ಣ ಮಿಷನ್ ಹಾಗೂ ರಾಮಕೃಷ್ಣ ಮಠದ ಮುಖ್ಯ ಕಚೇರಿ ಬೇಲೂರು ಮಠಕ್ಕೆ ಭೇಟಿ ನೀಡಿದರು. ಬೇಲೂರು ಮಠವನ್ನು ವೀಕ್ಷಿಸಿದ ಪ್ರಧಾನಿ ಮೋದಿ, ರಾಮಕೃಷ್ಣ ಪರಮಹಂಸರ ಪ್ರತಿಮೆ ಮುಂದೆ ಮಂಡಿಯೂರಿ ನಮಿಸಿದರು.
ಬಳಿಕ ಮಠದ ಆವರಣದಲ್ಲಿದ್ದ ಸನ್ಯಾಸಿಗಳನ್ನು ಪ್ರಧಾನಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಅಲ್ಲದೆ, ಮಠದಲ್ಲಿ ನಡೆಯುವ ಬೆಳಗಿನ ಪಾರ್ಥನೆಯಲ್ಲೂ ಪ್ರಧಾನಿ ಭಾಗವಹಿಸಿದರು.
ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಕೋಲ್ಕತದ ಫೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಜಗದೀಪ್ ಧನಕರ್, ಮೇಯರ್ ಪೀರ್ಹಾದ್ ಹಕೀಂ, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿಮಾನ ನಿಲ್ದಾಣದಲ್ಲಿ ಶನಿವಾರ ಸ್ವಾಗತಿಸಿದರು.
ಪ್ರಧಾನಿ ಅವರ ಎರಡು ದಿನದ ಪ್ರವಾಸದಲ್ಲಿ ನಿನ್ನೆ ಕೊಂಚ ಬದಲಾವಣೆಗಳಾಗಿತ್ತು. ಪ್ರಧಾನಿ ಅವರು ರಾಜಭವನದಲ್ಲಿ ತಂಗಲು ನಿರ್ಧರಿಸಲಾಗಿತ್ತು. ಆದರೆ ನಿನ್ನೆ ಬೇಲೂರು ಮಠದಲ್ಲಿ ವಾಸ್ತವ್ಯ ಹೂಡಿದ್ದರು.
ಹೌರಾ ಜಿಲ್ಲೆಯಲ್ಲಿರುವ ಮಠದಲ್ಲಿ ಪ್ರಧಾನಿ ವಾಸ್ತವ್ಯಕ್ಕೆ ಸನ್ಯಾಸಿಗಳು ಸಿದ್ಧತೆ ಮಾಡಿಕೊಂಡಿದ್ದರು. ಕೋಲ್ಕತ್ತಕ್ಕೆ ಆಗಮಿಸುವ ಮೊದಲು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಇಂದು ಮತ್ತು ನಾಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ. ರಾಮಕೃಷ್ಣಾಶ್ರಮ ಮಿಷನ್ ಜತೆ ಸಮಯ ಕಳೆಯುವುದು ಸಂತೋಷದ ಸಂಗತಿ. ಕಳೆದ ವರ್ಷ ನಮ್ಮನ್ನು ಅಗಲಿದ ಆತ್ಮಾನಂದಜೀ ಮಹಾರಾಜ್ ಅವರು ನೆನಪಾಗುತ್ತಾರೆ ಎಂದಿದ್ದಾರೆ.
ಅವರ ಅನುಪಸ್ಥಿತಿಯನ್ನು ಊಹಿಸಿಕೊಳ್ಳಲು ಅಸಾಧ್ಯ. ಅವರು ನನಗೆ ಜನ ಸೇವೇಯೇ ಜನಾರ್ದನ ಸೇವೆ ಎಂಬುದನ್ನು ಕಲಿಸಿದ್ದರು. ಅವರಿಲ್ಲದೆ ರಾಮಕೃಷ್ಣ ಮಿಷನ್ ಆಶ್ರಮವನ್ನು ನೆನಪಿಸಿಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್ನಲ್ಲಿ ಹಂಚಿಕೊಂಡಿದ್ದರು.
ಇನ್ನು ಇಂದು ಬೆಳಗ್ಗೆ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮತ್ತು ಕೋಲ್ಕತ್ತ ಪೋರ್ಟ್ ಟ್ರಸ್ಟ್ನ 150 ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ದೆಹಲಿಗೆ ಮರಳಲಿದ್ದಾರೆ. (ಏಜೆನ್ಸೀಸ್)