Premada Oorali: ಕನ್ನಡ ಸಿನಿಮಾದ ತಾಕತ್ತು ತೋರಿಸಿದ ‘ಪ್ರೇಮದ ಊರಲಿ’! 50ಕ್ಕೂ ಹೆಚ್ಚು ಥಿಯೇಟರ್‌ಗಳಿಗೆ ಮತ್ತೆ ಜೀವಕಳೆ

ಪ್ರೇಮದ ಊರಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಯಶಸ್ಸಿನಿಂದ ಮುಚ್ಚಿದ್ದ 50ಕ್ಕೂ ಹೆಚ್ಚು ಥಿಯೇಟರ್‌ಗಳು ಮತ್ತೆ ತೆರೆದಿದ್ದು, ಉಪೇಂದ್ರ ಕೂಡ ಚಿತ್ರವನ್ನು ಹೊಗಳಿದ್ದಾರೆ.
Premada Oorali Kannada Cinema
ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’
Published on: 

Premada Oorali Cinema: ಕನ್ನಡ ಸಿನಿಮಾಗಳನ್ನ ನೋಡೋಕೆ ಜನ ಥಿಯೇಟರ್‌ಗೆ ಬರ್ತಿಲ್ಲ ಅನ್ನೋ ಚರ್ಚೆ ನಡೀತಿರೋ ನಡುವೆಯೇ, ‘ಪ್ರೇಮದ ಊರಲಿ’ ಸಿನಿಮಾ ಚಿತ್ರಮಂದಿರಗಳಿಗೆ ಹೊಸ ಕಳೆ ತಂದಿದೆ. ಈ ಸಿನಿಮಾದ ಯಶಸ್ಸಿನಿಂದ ಮುಚ್ಚಿದ್ದ 50ಕ್ಕೂ ಹೆಚ್ಚು ಥಿಯೇಟರ್‌ಗಳು ಮತ್ತೆ ಓಪನ್ ಆಗಿವೆ ಎನ್ನಲಾಗಿದೆ. ಇದರಿಂದ ಸಂಕಷ್ಟದಲ್ಲಿರೋ ಕರ್ನಾಟಕದ ಚಿತ್ರಮಂದಿರ ಉದ್ಯಮಕ್ಕೆ ಹೊಸ ಭರವಸೆ ಮೂಡಿದೆ.

ಕೊರೊನಾ ಮುನ್ನ ರಾಜ್ಯದಲ್ಲಿ ಸುಮಾರು 600 ಥಿಯೇಟರ್‌ಗಳಿದ್ದವು ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಳ, ಪ್ರೇಕ್ಷಕರ ಸಂಖ್ಯೆ ಇಳಿಕೆ ಸೇರಿದಂತೆ ಹಲವು ಕಾರಣಗಳಿಂದ ಈ ಸಂಖ್ಯೆ ಈಗ ಸುಮಾರು 400ಕ್ಕೆ ಕುಸಿದಿದೆ. ಅದರಲ್ಲೂ ಸಿಂಗಲ್‌ ಸ್ಕ್ರೀನ್‌ಗಳನ್ನು ನಡೆಸುವುದು ಮಾಲೀಕರಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಮತ್ತೆ ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುತ್ತಿರುವುದು ಗಮನ ಸೆಳೆದಿದೆ.

ಸಿಂಗಲ್ ಸ್ಕ್ರೀನ್‌ನಿಂದ ಮಲ್ಟಿಪ್ಲೆಕ್ಸ್‌ವರೆಗೆ ‘ಪ್ರೇಮದ ಊರಲಿ’ ಹವಾ

‘ಪ್ರೇಮದ ಊರಲಿ’ ಸಿನಿಮಾ ರಾಜ್ಯದ ಹಲವು ಕಡೆ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ ಎನ್ನಲಾಗಿದೆ. ಸಿಂಗಲ್ ಸ್ಕ್ರೀನ್‌ಗಳಿಂದ ಮಲ್ಟಿಪ್ಲೆಕ್ಸ್‌ಗಳವರೆಗೆ ಸಿನಿಮಾ ನೋಡಲು ಜನ ಬರುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಬೇರೆ ಭಾಷೆಯ ದೊಡ್ಡ ಬಜೆಟ್ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್‌ಗಳು ಸಿಗುವುದು ಸಾಮಾನ್ಯ.

ಆದರೆ, ಸರಳ ಪ್ರೇಮಕಥೆಯೊಂದಿಗೆ ಬಂದಿರುವ ‘ಪ್ರೇಮದ ಊರಲಿ’ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ದೊಡ್ಡ ಬಜೆಟ್‌ಗಿಂತ ಒಳ್ಳೆಯ ಕಥೆ ಮತ್ತು ಪ್ರೇಕ್ಷಕರ ಮೆಚ್ಚುಗೆಯೇ ಸಿನಿಮಾ ಗೆಲುವಿಗೆ ಮುಖ್ಯ ಎಂಬುದಕ್ಕೆ ಈ ಚಿತ್ರ ಉದಾಹರಣೆಯಾಗಿದೆ. ಇನ್ನು, ಚಿತ್ರದ ಯಶಸ್ಸಿನಿಂದ 50ಕ್ಕೂ ಹೆಚ್ಚು ಮುಚ್ಚಿದ್ದ ಥಿಯೇಟರ್‌ಗಳು ಮತ್ತೆ ಆರಂಭವಾಗಿವೆ ಎನ್ನುವ ವರದಿ ಪ್ರದರ್ಶಕರ ವಲಯದಲ್ಲಿ ಸಂತಸ ಮೂಡಿಸಿದೆ.

ಎರಡು ವಾರಕ್ಕೊಮ್ಮೆಯಾದರೂ ಹಿಟ್ ಸಿನಿಮಾ ಬೇಕು

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಅವರು ಚಿತ್ರಮಂದಿರಗಳು ನಿರಂತರವಾಗಿ ನಡೆಯಬೇಕಾದರೆ ಯಶಸ್ವಿ ಸಿನಿಮಾಗಳು ಬರೋದು ಮುಖ್ಯ ಎಂದು ಹೇಳಿದ್ದಾರೆ. ಈ ಹಿಂದೆ ಕನ್ನಡದ ‘ಸು ಫ್ರಮ್ ಸೋ’ ಸಿನಿಮಾ ಕೂಡ ಕೆಲವು ಮುಚ್ಚಿದ್ದ ಥಿಯೇಟರ್‌ಗಳನ್ನು ಮತ್ತೆ ತೆರೆಯಲು ನೆರವಾಗಿತ್ತು. ಈಗ ‘ಪ್ರೇಮದ ಊರಲಿ’ ಮತ್ತಷ್ಟು ಚಿತ್ರಮಂದಿರಗಳ ಪುನರಾರಂಭಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

‘ಜೈಲರ್ 2’, ‘ರಣಬಾಲಿ’ ಸಿನಿಮಾಗಳಿಂದ ಹೆಚ್ಚಲಿದೆ ಪೈಪೋಟಿ

‘ಜೈಲರ್ 2’, ‘ರಣಬಾಲಿ’ ಸಿನಿಮಾಗಳ ಬಿಡುಗಡೆ ನಿರೀಕ್ಷೆಯಿಂದ ಥಿಯೇಟರ್‌ಗಳಲ್ಲಿ ಪೈಪೋಟಿ ಹೆಚ್ಚಾಗುವ ಸಾಧ್ಯತೆಯಿದೆ. ಈ ದೊಡ್ಡ ಸಿನಿಮಾಗಳ ನಡುವೆಯೂ ‘ಪ್ರೇಮದ ಊರಲಿ’ ತನ್ನ ಓಟ ಮುಂದುವರಿಸುತ್ತಾ ಅನ್ನೋ ಕುತೂಹಲ ಇದೆ. ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ, ಇನ್ನಷ್ಟು ಥಿಯೇಟರ್‌ಗಳು ಮತ್ತೆ ಓಪನ್ ಆಗುವ ನಿರೀಕ್ಷೆಯಿದೆ.

‘ಪ್ರೇಮದ ಊರಲಿ’ ನಿರ್ದೇಶಕರಿಗೆ ಉಪೇಂದ್ರ ಮೆಚ್ಚುಗೆ

ನಟ ಉಪೇಂದ್ರ ಅವರು ‘ಪ್ರೇಮದ ಊರಲಿ’ ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ. ನಿರ್ದೇಶಕರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿದ ಅನುಭವವನ್ನು ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಿದೆ ಎಂದು ಹೋಲಿಸಿರುವ ಉಪೇಂದ್ರ, ನಿರ್ದೇಶಕರ ಚಿತ್ರಕಥೆ ಮತ್ತು ನಿರೂಪಣಾ ಶೈಲಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Nayyi Navelli X Review: 'ನಿರಾಸೆ', 'ಬೋರ್ ಹೊಡೆಯುವ ಸಿನಿಮಾ' ಎಂದ ನೆಟ್ಟಿಗರು; ಯಾಮಿ ಗೌತಮ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಒಟ್ಟಿನಲ್ಲಿ, ‘ಪ್ರೇಮದ ಊರಲಿ’ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿದೆ. ಮುಚ್ಚಿದ್ದ ಚಿತ್ರಮಂದಿರಗಳು ಮತ್ತೆ ಆರಂಭವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಈ ಗೆಲುವು ಮುಂದಿನ ಕನ್ನಡ ಸಿನಿಮಾಗಳಿಗೂ ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುತ್ತಾ ಅನ್ನೋದು ಕುತೂಹಲ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net