ಕೊಳವೆ ಬಾವಿ ಕೊರೆಸುವ ಮುನ್ನ ಅನುಮತಿ ಕಡ್ಡಾಯ|Permission is mandatory

Borewell
Published on

ಬೆಂಗಳೂರು: ಕೊಳವೆ ಬಾವಿ ಕೊರೆಸಲು ಇನ್ನು ಮುಂದೆ ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ(Permission is mandatory before drilling a borewell). 

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ)ತಿದ್ದುಪಡಿ ಅಧಿನಿಯಮಕ್ಕೆ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ.

ಒಂದು ವೇಳೆ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಯಿಸಿದರೆ ಹಾಗೂ ಕೊಳವೆ ಬಾವಿ ಕೊರೆಸುವಲ್ಲಿ ಇರುವ ನಿಬಂಧನೆಗಳನ್ನು ಉಲ್ಲಂಸಿದಲ್ಲಿ ಕಾರವಾಸ ಶಿಕ್ಷೆ ಹಾಗೂ ದಂಡ(Imprisonment and fine) ಕೂಡ ಬೀಳಲಿದೆ!

ಕುಡಿಯುವ ನೀರಿಗೆ ಆದ್ಯತೆ, ನೀರಿನ ಮೂಲ ಸಂರಕ್ಷಣೆ ಉದ್ದೇಶದಿಂದ ರಾಜ್ಯಪಾಲರ ಅಂಕಿತದೊಂದಿಗೆ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಭೂ ಮಾಲೀಕ ಮಾತ್ರವಲ್ಲದೆ, ಅನುಷ್ಠಾನ ಏಜೆನ್ಸಿಗಳೂ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಭೂ ಮಾಲೀಕರು/ ಏಜೆನ್ಸಿಗಳಿಗೆ ಮಾತ್ರವಲ್ಲದೆ, ಕೊಳವೆ ಬಾವಿ ಕೊರೆಸುವಲ್ಲಿ ಮತ್ತು ನಿಷ್ಕ್ರಿಯ ಕೊಳವೆ ಬಾವಿ ನಿರ್ವಹಣೆ ಮಾಡುವ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೂ ಕರ್ತವ್ಯ ನಿಗದಿಪಡಿಸಲಾಗಿದೆ.

ನಿಯಮ ಏನು ಹೇಳುತ್ತವೆ?

*ಅಂತರ್ಜಲ ಪ್ರಾಧಿಕಾರ ಅಥವಾ ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆದ ಮೇಲೆ ಭೂ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ 15 ದಿನ ಮೊದಲು ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.

*ಭೂಮಿ ಅಥವಾ ಆವರಣಗಳ ಮಾಲೀಕ(ರೈತರನ್ನು ಹೊರತುಪಡಿಸಿ) ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.

*ವಿಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊರೆ ಭಾವಿ ಅಥವಾ ಕೊಳವೆ ಬಾವಿಯನ್ನು 24 ಗಂಟೆ ಒಳಗೆ ಸುರಕ್ಷಿತವಾಗಿ ಮುಚ್ಚಬೇಕು. ಮುಚ್ಚಿರುವ ಕುರಿತು ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು.

ನಿಯಮಗಳನ್ನು ಯಾರೇ ವ್ಯಕ್ತಿ/ಏಜೆನ್ಸಿ ಉಲ್ಲಂಸಿದರೆ ಮೂರು ತಿಂಗಳ ಅವಧಿಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಐದು ಸಾವಿರ ರೂ.ಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಲಾಗುತ್ತದೆ.

ನಿಷ್ಕ್ರಿಯ ಕೊರೆಬಾವಿ ಅಥವಾ ಕೊಳವೆ ಬಾವಿಯ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಲು ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಥವಾ ಮಂಡಳಿಗಳ ಒಬ್ಬ ಅಧಿಕಾರಿಯನ್ನು ಗೊತ್ತುಪಡಿಸಲು ಕೂಡ ಕಾಯ್ದೆಯಲ್ಲಿ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net