

ನವದೆಹಲಿ: ಮೊದಲು ದುಡ್ಡು ಕೊಡಿಸಲಿ, ಕೇವಲ ಖಾಲಿ ಮಾತನಾಡುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಛೇಡಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಟನಲ್ ರಸ್ತೆ ವಿಚಾರವಾಗಿ ನಿತಿನ್ ಗಡ್ಕರಿ ಅವರನ್ನು ಕುಮಾರಸ್ವಾಮಿ ಅವರು ಭೇಟಿಯಾಗಿ ಚರ್ಚೆ ನಡೆಸಿರೋದು ಕ್ರೆಡಿಟ್ ವಾರ್ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಸದ್ಯಕ್ಕೆ ಸಂಚಿವ ಸಂಪುಟ ಬದಲಾವಣೆ ಕುರಿತು ಯಾವುದೇ ಚರ್ಚೆಯಿಲ್ಲ. ನಾವು ಬಂದಿರುವುದು ಅಭಿವೃದ್ದಿ ವಿಚಾರಗಳನ್ನು ಚರ್ಚೆ ನಡೆಸಲು. ಬೆಂಗಳೂರಿನಲ್ಲಿ ಒಂದಷ್ಟು ರಸ್ತೆಗಳನ್ನು ಅಗಲೀಕರಣ ಮಾಡಬೇಕಿದೆ. ಇದಕ್ಕೆ ರಕ್ಷಣಾ ಇಲಾಖೆ ಭೂಮಿಗಳ ಅವಶ್ಯಕತೆಯಿದೆ. ಈ ಕಾರಣಕ್ಕೆ ಹಾಗೂ ದಸರಾ ವೇಳೆ ಚುಟುಕು ಏರ್ ಶೋ ನಡೆಸಲು ರಕ್ಷಣಾ ಸಚಿವರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದೇವೆ ಎಂದು ಹೇಳಿದರು.
ನೀವು ಸೋನಿಯಾ ಗಾಂಧಿ ಹಾಗೂ ಇತರೆ ಹಿರಿಯ ನಾಯಕರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದಾಗ, “ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿಲ್ಲ. ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡದಿದ್ದರೆ ಯಾರನ್ನೂ ಭೇಟಿಯಾಗಲು ಆಗುವುದಿಲ್ಲ. ರಾಹುಲ್ ಗಾಂಧಿ ಅವರು ಪಾಟ್ನಾಗೆ ತೆರಳಿದ್ದಾರೆ” ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಭಾಷಾ ಸಂಘರ್ಷದ ಬಗ್ಗೆ ಕೇಳಿದಾಗ, “ಇದು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಕನ್ನಡ ಮತ್ತು ಇಂಗ್ಲಿಷ್ ಗೆ ಪ್ರಾಮುಖ್ಯತೆ ನೀಡುತ್ತೇವೆ" ಎಂದು ಹೇಳಿದರು.
ಸುರ್ಜೇವಾಲ ಅವರ ಕರ್ನಾಟಕ ಭೇಟಿಯ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಜಿಲ್ಲಾ ಅಧ್ಯಕ್ಷರನ್ನು ಕರೆಸಿ ಸಭೆ ನಡೆಸಲಾಗಿದೆ. ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಾಧ್ಯಮಗಳು ಹೇಳಿದಂತೆ ಯಾವುದೇ ರಾಜಕೀಯ ವಿಚಾರ ಇಲ್ಲಿಲ್ಲ. ಕೇವಲ ಸಂಘಟನೆ ವಿಚಾರ” ಎಂದು ಹೇಳಿದರು.