ದೀವರ ಕಲೆಗೆ ಸ್ಫೂರ್ತಿಯೇ ಪ್ರಕೃತಿ

deevara samskrutika vaibhava
ನಗರದ ಈಡಿಗರ ಭವನದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ದೀವರ ಸಾಂಸ್ಕೃತಿಕ ವೈಭವ ಉದ್ಘಾಟಿಸಿದರು
Published on

ಶಿವಮೊಗ್ಗ: ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಲುಪಿಸುವ ಕೆಲಸ ಜರೂರಾಗಿ ಆಗಬೇಕಿದೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ನಗರದ ಈಡಿಗರ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ, ಅಕ್ಷಯ ಸೊಸೈಟಿ, ಕಾಗೋಡಿನ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ಧೀರ ದೀವರ ಬಳಗ, ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಭಾನುವಾರ ದೀವರ ಸಾಂಸ್ಕೃತಿಕ ವೈಭವ-2024 ಉದ್ಘಾಟಿಸಿ ಮಾತನಾಡಿದ ಅವರು, ಕಲೆಗಳು ನಶಿಸಿ ಹೋಗದೇ ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ. ಅದು ಸಾಧ್ಯ ಆಗಬೇಕಾದರೆ ಅಕ್ಷರ ಜ್ಞಾನ ಮುಖ್ಯವಾಗಿದೆ ಎಂದರು.

ದೀವರ ಕಲೆ ಕಲೆಗೆ ಸ್ಫೂರ್ತಿಯೇ ಪ್ರಕೃತಿಯಾಗಿದೆ. ಇಲ್ಲಿ ಪ್ರಕೃತಿಗಿಂತ ದೊಡ್ಡವರು ಯಾರೂ ಇಲ್ಲ. ಪ್ರಕೃತಿಯು ಅತಿವೃಷ್ಟಿ, ಅನಾವೃಷ್ಟಿ ರೂಪದಲ್ಲಿ ಬರುತ್ತದೆ. ವಿಶೇಷವಾಗಿ ನಮ್ಮ ಪ್ರಕೃತಿಯಲ್ಲಿ ಜಾನಪದ ಕಲೆಗಳ ಶಕ್ತಿ ಅನಾವರಣಗೊಂಡಿದ್ದು ವಿದ್ಯೆ, ಸಂಸ್ಕೃತಿ, ಬುದ್ದಿವಂತಿಕೆಯನ್ನೂ ಪ್ರಕೃತಿ ಕಲಿಸಿದೆ. ಪ್ರಕೃತಿದತ್ತವಾಗಿರುವ ದೀವರ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಕರೆ ನೀಡಿದರು.

ಒಳ್ಳೆಯದು ಮತ್ತು ಕೆಟ್ಟದು ಎರಡನ್ನೂ ಪ್ರಕೃತಿ ಕಲ್ಪಿಸಿದೆ. ಬೇಟೆಯಾಡುವುದು ಅಪ್ಪ ಅಮ್ಮ ಕಲಿಸಿದ್ದಲ್ಲ, ಪ್ರಕೃತಿ ಕಲಿಸಿಕೊಟ್ಟಿದೆ. ಕಲೆಗಳು ಇಂದಿಗೂ ಪ್ರಕೃತಿಯಲ್ಲಿ ಅಡಗಿದ್ದು ಆ ಪ್ರಕೃತಿ ದೇವರ ರೂಪದಲ್ಲಿದೆ. ರುದ್ರಾವತಾರ ಮತ್ತು ಶಾಂತವಾಗಿ ಪ್ರಕೃತಿ ಇದ್ದು ನಮ್ಮ ಸಂಸ್ಕೃತಿಯನ್ನು ಪಸರಿಸುವುದು ಬಹಳ ಸುಲಭವಿದೆ. ಆದರೆ ಯಾವುದನ್ನು ತಲುಪಿಸಬೇಕೋ ಅದನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡರಾದ ತಬಲಿ ಬಂಗಾರಪ್ಪ, ರಾಜಪ್ಪ ಮಾಸ್ತರ್, ಲಕ್ಷ್ಮೀಗಡೇಮನೆ, ಡಾ. ಮೋಹನ್ ಚಂದ್ರಗುತ್ತಿ, ಬಳಗದ ಸಂಚಾಲಕರಾದ ನಾಗರಾಜ್ ನೇರಿಗೆ, ಸುರೇಶ್ ಬಾಳೆಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net