ಫಿಲಡೆಲ್ಫಿಯಾದಲ್ಲಿ ನಡೆದ ವಿಶ್ವ ಅಕ್ಕ ಸಮ್ಮೇಳನಕ್ಕೆ ವಿಧ್ಯುಕ್ತ ತೆರೆ

 ಅಕ್ಕ ಸಿನಿಗನ್ನಡ ಫಿಲ್ಮ ಫೆಸ್ಟಿವಲ್ ಸಂಘಟಕರಾದ ಗೌರೀಶ್ ಅಕ್ಕಿ ಮತ್ತು ದೇವೇಂದ್ರ ಬಡಿಗೇರ್
ಅಕ್ಕ ಸಿನಿಗನ್ನಡ ಫಿಲ್ಮ ಫೆಸ್ಟಿವಲ್ ಸಂಘಟಕರಾದ ಗೌರೀಶ್ ಅಕ್ಕಿ ಮತ್ತು ದೇವೇಂದ್ರ ಬಡಿಗೇರ್
Published on
ಫಿಲಡೆಲ್ಫಿಯಾ: ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿ ಮೂರು ದಿನಗಳ ಕಾಲ ನಡೆದ 25ನೇ ವರ್ಷದ ಅಕ್ಕ ಸಮ್ಮೇಳನಕ್ಕೆ ಸಂಭ್ರಮದ ತೆರೆ ಬಿದ್ದಿದೆ.
ಸಮ್ಮೇಳನದ ಕೊನೆಯ ದಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು ನೇತೃತ್ವವಹಿಸಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಾರಥ್ಯದಲ್ಲಿ ನಡೆಯಿತು.
ಸಮ್ಮೇಳನದ ಅಂಗವಾಗಿ ಬೆಂಗಳೂರಿನಿಂದ ತೆರಳಿದ್ದ ಸಿನಿಗನ್ನಡ ಫಿಲ್ಮ ಫೆಸ್ಟಿವಲ್ ತಂಡವು ಚಲನಚಿತ್ರ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿತು.ಬೆಂಗಳೂರಿನ ಕಲಾವಿದರ ಸಂಘದಲ್ಲಿ ಈ ಹಿಂದೆ ಘೋಷಿಸಲಾಗಿದ್ದ ಹತ್ತು ಸಿನೆಮಾಗಳನ್ನು ಫಿಲಡೆಲ್ಫಿಯಾ ಕನ್ವೆನ್ಷನ್ ಸೆಂಟರ್‌ನ ಶಂಕರನಾಗ್ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಕನ್ನಡಿಗರು ಚಿತ್ರಗಳನ್ನು ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ವೇಳೆ ಯಮುನಾ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಕಿರುಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ 23 ಕಿರುಚಿತ್ರಗಳನ್ನೂ ಪ್ರದರ್ಶಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಸಂಜೆ ನಡೆದ ಅದ್ದೂರಿ ಸಮಾರೋಪ ಸಮಾರಂಭದಲ್ಲಿ ಅಕ್ಕ ಸಿನಿಗನ್ನಡ ಫಿಲ್ಮ ಫೆಸ್ಟಿವಲ್ ಸಂಘಟಕರಾದ ಗೌರೀಶ್ ಅಕ್ಕಿ ಮತ್ತು ದೇವೇಂದ್ರ ಬಡಿಗೇರ್ ಅವರು ಚಿತ್ರೋತ್ಸವದ ಉದ್ದೇಶ, ಆಯೋಜನೆ ಹಾಗೂ ಪ್ರದರ್ಶನಗೊಂಡ ಚಿತ್ರಗಳನ್ನು ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಿಮಾ ಚಿತ್ರದ ನಿರ್ಮಾಪಕ ನವೀನ್ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಕ್ಕ ಸಮ್ಮೇಳನದ ಅಧ್ಯಕ್ಷ ಮಧು ರಂಗಯ್ಯ ಅವರು ಪ್ರಶಸ್ತಿಯನ್ನು ವಿತರಿಸಿದರು.
ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರತಂಡಗಳಿಗೆ ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಅಭಿನಂದಿಸಲಾಯಿತು.ಮೂರು ದಿನಗಳ ಕಾಲ ನಡೆದ 25ನೇ ಅಕ್ಕ ಸಮ್ಮೇಳನವು ಕನ್ನಡ ಭಾಷೆ, ಸಂಸ್ಕೃತಿ, ಕಲೆ ಮತ್ತು ಸಿನಿಮಾದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಸಮ್ಮೇಳನದ ನೆನಪುಗಳು ಹಾಗೂ ಮುಂದಿನ ಅಕ್ಕ ಸಮ್ಮೇಳನದ ಹೊಸ ನಿರೀಕ್ಷೆಗಳನ್ನು ಹೊತ್ತುಕೊಂಡು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಕನ್ನಡಿಗರು ಕಾರ್ಯಕ್ರಮದಲ್ಲಿ ಮಿಂದೆದ್ದರು. ಬಿಸಿನೆಸ್ ಫೋರಂ ಸೇರಿದಂತೆ ಖ್ಯಾತ ಗಾಯಕರಾದ ನವೀನ್ ಸಜ್ಜು ಹಾಗೂ ಸಂಗೀತಾ ಕಟ್ಟಿ ಅವರ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net