ಪತಿ ಹೃದಯಾಘಾತಕ್ಕೆ ಬಲಿ! ಕಣ್ಣೀರಿಡುತ್ತಿದ್ದ ಪತ್ನಿಯ ಅಸಲಿ ಮುಖವಾಡವನ್ನು ಕಡೆಗೂ ಕಳಚಿಟ್ಟ ಖಾಕಿ

ಅನೈತಿಕ ಸಂಬಂಧದಲ್ಲಿದ್ದ ಮಹಿಳೆ ಪತಿಯನ್ನು ಕೊಂದ ಘಟನೆ
ಅನೈತಿಕ ಸಂಬಂಧದಲ್ಲಿದ್ದ ಮಹಿಳೆ ಪತಿಯನ್ನು ಕೊಂದ ಘಟನೆ
Published on

ಪ್ರಮುಖ ಮುಖ್ಯಾಂಶಗಳು

  • ಮುಸ್ಕಾನ್​ ತನ್ನ ಪತಿಯನ್ನು ಕೊಂದ ಘಟನೆ ನೆನಪಿಸಿತು ಈ ಪ್ರಕರಣ
  • ಪ್ರಿಯಕರನ ಜತೆಗೂಡಿ ಪತಿಗೆ ಗುಂಡಿ ತೋಡಿದ ಕಿರಾತಕಿ
  • ಮೂವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿರುವ ಖಾಕಿ
ತೆಲಂಗಾಣ: ಈ ವರ್ಷ ಹಲವು ಭೀಕರ ಹಾಗೂ ಬರ್ಬರ ಕೊಲೆ ಘಟನೆಗಳು ದೇಶದಲ್ಲಿ ವರದಿಯಾಗಿವೆ. ಪ್ರಿಯಕರನ ಜತೆಗೂಡಿ ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿ, ಆತನ ದೇಹವನ್ನು ನೀಲಿ ಡ್ರಮ್​ನೊಳಗೆ ಮುಚ್ಚಿಟ್ಟ ಮುಸ್ಕಾನ್​ ಎಂಬ ಕ್ರೂರ ಮಹಿಳೆಯ ಹೆಸರು ಬಹುತೇಕರು ಮರೆಯಲು ಸಾಧ್ಯವೇ ಇಲ್ಲ. ಪತಿಗೆ ದ್ರೋಹ ಬಗೆದು, ಅನೈತಿಕ ಸಂಬಂಧದಲ್ಲಿದ್ದ ಈಕೆ, ಗಂಡನ ಕೊಲೆಗೈದು ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗಿ, ಮೋಜು-ಮಸ್ತಿ ಮಾಡಿದ್ದು ಮೃತನ ಹೆತ್ತವರ ರಕ್ತ ಕುದಿಯುವಂತೆ ಮಾಡಿತು. ಸದ್ಯ ಇದೇ ರೀತಿಯಲ್ಲಿ ಇಲ್ಲೊಬ್ಬಳು ಮಹಿಳೆ ತನ್ನ ಗಂಡನಿಗೆ ಸದ್ದಿಲ್ಲದೇ ಗುಂಡಿ ತೋಡಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಮದುವೆಯಾಗಿದ್ದರೂ ಅನ್ಯ ಪುರುಷನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡು, ಅವರ ಮೇಲಿನ ವ್ಯಾಮೋಹದಿಂದ ಕೆಲವು ಮಹಿಳೆಯರು, ತಮ್ಮ ಪತಿಯರನ್ನೇ ಬರ್ಬರವಾಗಿ ಕೊಲೆಗೈಯುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದು ನಿಜಕ್ಕೂ ಆತಂಕದ ವಿಷಯವೇ ಸರಿ. ಆ ಸಾಲಿಗೆ ಈ ಘಟನೆ ಕೂಡ ಸೇರ್ಪಡೆ. ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ತನ್ನ ಪತಿಯನ್ನು ಸಾಯಿಸಿ, ಆತ ಹೃದಯಾಘಾತದಿಂದ ಸಾವನ್ನಪ್ಪಿದ ಎಂದು ಇಡೀ ಮನೆಯವರನ್ನು ನಂಬಿಸಿ, ಪ್ರಿಯಕರನೊಂದಿಗೆ ಜಾಲಿಯಾಗಿದ್ದಳು. ಆದರೆ, ಇದೆಲ್ಲವೂ ಅವಳಾಡಿದ ನಾಟಕ! ಅಸಲಿ ಸತ್ಯ ಬೇರೆಯೇ ಇದೆ ಎಂದು ಸಾಬೀತುಪಡಿಸಿದ್ದು ತೆಲಂಗಾಣ ಪೊಲೀಸರು ಎಂಬುದೇ ಸದ್ಯ ರೋಚಕ.

ಏನಿದು ಘಟನೆ?

ಬೆಂಗಳೂರಿನ ವಿ.ಜೆ. ಅಶೋಕ್ (45) ಮತ್ತು ಜೆ. ಪೂರ್ಣಿಮಾ (36) 2011ರಲ್ಲಿ ಮದುವೆಯಾದ ಜೋಡಿ. ಇವರಿಗೆ 12 ವರ್ಷದ ಪುತ್ರನಿದ್ದಾನೆ. ಪೂರ್ಣಿಮಾ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಟ್ಟಡ ಕಾರ್ಮಿಕ ಮಹೇಶ್ (22) ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಈ ವಿಚಾರ ಪತ್ತೆಹಚ್ಚಿದ ಅಶೋಕ್​, ಇದನ್ನು ಹಲವು ಬಾರಿ ಪ್ರಶ್ನಿಸಿ, ಎಚ್ಚರಿಸಿದ್ದ. ಆದರೆ, ಪೂರ್ಣಿಮಾಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರಲಿಲ್ಲ.
ಈ ವಿಷಯಕ್ಕೆ ದಂಪತಿಗಳ ನಡುವೆ ಹಲವಾರು ಬಾರಿ ಜಗಳ ನಡೆದಿತ್ತು. ತನ್ನ ಪ್ರಿಯಕರನ ಜತೆಗಿನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಕೆರಳಿದ ಪೂರ್ಣಿಮಾ, ಕಡೆಗೂ ಗಂಡನಿಗೆ ಗುಂಡಿ ತೋಡಲು ನಿರ್ಧರಿಸಿದಳು. ಅಂತೆಯೇ, ಈ ಬಗ್ಗೆ ಮಹೇಶ್​ಗೆ ತಿಳಿಸಿದಳು. ಮಹೇಶ್ ತನ್ನ ಸ್ನೇಹಿತ ಯದಾದ್ರಿ ಭುವನಗಿರಿ ಜಿಲ್ಲೆಯ ಭುಕ್ಯಾ ಸಾಯಿಕುಮಾರ್ (22) ಸಹಾಯ ಕೋರಿ, ಅಶೋಕ್​ರನ್ನು ಕೊಲೆಗೈದರು. ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಎಂದು ಬಿಂಬಿಸುವಂತೆ ಸಂಚು ಹೂಡಿದರು.
ಡಿ.11ರ ಸಂಜೆ, ಅಶೋಕ್ ಮನೆಗೆ ಹಿಂತಿರುಗಿದಾಗ, ಮಹೇಶ್ ಮತ್ತು ಸಾಯಿ ಕುಮಾರ್, ಅಶೋಕ್​ಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಸಾಯಿ ಜತೆಗೂಡಿದ ಪೂರ್ಣಿಮಾ, ಗಂಡನ ಕೈ-ಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ. ಮಹೇಶ್ ಕುತ್ತಿಗೆಗೆ ಮೂರು ಹಗ್ಗಗಳನ್ನು ಕಟ್ಟಿ ಉಸಿರುಗಟ್ಟಿಸಿ ಪಾಪಿಗಳು, ಆತನ ಉಸಿರು ನಿಂತಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಪೂರ್ಣಿಮಾ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಎಂದು ನಾಟಕವಾಡಿದ್ದಳು.
ಈ ಕೇಸ್​ ಕೈಗೆತ್ತಿಕೊಂಡ ಪೊಲೀಸರು, ಮೃತನ ದೇಹದ ಮೇಲೆ ಗಾಯಗಳಿದ್ದ ಕಾರಣ, ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಶಂಕಿಸಿ, ಪ್ರಕರಣ ದಾಖಲಿಸಿದ್ದರು. ಆದಾಗ್ಯೂ, ತನಿಖೆಯ ಸಮಯದಲ್ಲಿ ಪೂರ್ಣಿಮಾಳ ವರ್ತನೆ, ದಂದ್ವ ಹೇಳಿಕೆಗಳು ಖಾಕಿ ಪಡೆಯ ಅನುಮಾನವನ್ನು ಗಟ್ಟಿಯಾಗಿಸಿತು. ಬಳಿಕ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಸಂಗತಿಗಳು ಬಯಲಿಗೆ ಬಂದಿತು. ಮನೆಯಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಪೊಲೀಸರು, ಪೂರ್ಣಿಮಾ ಮತ್ತು ಆಕೆಯ ಪ್ರಿಯಕರ ಮಹೇಶ್ ಮತ್ತು ಸ್ನೇಹಿತ ಸಾಯಿ ಕುಮಾರ್​ನನ್ನು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net