ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಕೊನೆಗೊಂಡಿದೆ. ಕೆಲವೇ ತಿಂಗಳ ಹಿಂದೆ ದಾಖಲೆಯ ಎತ್ತರದಲ್ಲಿದ್ದ ಚಿನ್ನದ ದರ ಈಗ ಸತತ ಕುಸಿತ ಕಾಣುತ್ತಿದ್ದು, ಖರೀದಿದಾರರಲ್ಲಿ ಸಂತಸ, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ನ. 20ರಂದು 10 ಗ್ರಾಂ ಚಿನ್ನದ ಬೆಲೆ 1,23,893 ರೂ.ಗೆ ಮುಕ್ತಾಯಗೊಂಡಿದ್ದು, ನ.5ರ ಬಳಿಕ 20 ಸಾವಿರ ರೂ.ಗೂ ಅಧಿಕ ಕುಸಿತ ಕಂಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 22,822 ರೂ. ಇಳಿದಿರುವುದು ಮಾರುಕಟ್ಟೆಯ ತೀವ್ರ ಬದಲಾವಣೆಗೆ ಸಾಕ್ಷಿ. ಅಮೆರಿಕದ ಬಡ್ಡಿದರ ಏರಿಕೆ ನಿರೀಕ್ಷೆ, ಡಾಲರ್ ಬಲವರ್ಧನೆ, ಬಾಂಡ್ ಇಳುವರಿ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಸುಧಾರಣೆ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿವೆ. ಈಗ ಚಿನ್ನ 1 ಲಕ್ಷ ರೂ. ಮಟ್ಟಕ್ಕೆ ಇಳಿಯಬಹುದೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತಕ್ಕೆ ಯಾವ ಅಂಶಗಳು ಕಾರಣವಾಗಬಹುದು? ಮದುವೆ ಹಾಗೂ ಹೂಡಿಕೆ ಉದ್ದೇಶಕ್ಕೆ ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ? ಬೆಲೆ ಇಳಿಕೆಯ ಹಿಂದಿನ ಕಾರಣ, ಮುಂದಿನ ಗುರಿ ಮತ್ತು ಖರೀದಿದಾರರ ಲೆಕ್ಕಾಚಾರ ಇಲ್ಲಿದೆ.
ಈ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಹಿಂದೆಂದೂ ಕಾಣದ ಗರಿಷ್ಠ ಮಟ್ಟ ತಲುಪಿತ್ತು. 10 ಗ್ರಾಂ ಚಿನ್ನದ ಬೆಲೆ 1.80 ಲಕ್ಷ ರೂ. ದಾಟಿ ದಾಖಲೆ ನಿರ್ವಿುಸಿತ್ತು. ಆದರೆ ಇತ್ತೀಚೆಗೆ ಪರಿಸ್ಥಿತಿ ಬದಲಾಗಿ, ಚಿನ್ನದ ಬೆಲೆ ಒತ್ತಡಕ್ಕೆ ಸಿಲುಕಿದೆ. ಅ.19ರಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,46,406 ರೂ. ಇತ್ತು. ನ.20ರ ವೇಳೆಗೆ ಅದು 1,23,584 ರೂ.ಗೆ ಇಳಿದಿದೆ. ಅಂದರೆ ಒಂದು ತಿಂಗಳಲ್ಲೇ 22,822 ರೂ. ಅಥವಾ ಶೇ. 15.59 ಕುಸಿತ ಕಂಡಿದೆ. ಅದರಲ್ಲೂ ನ.17ರಿಂದ 20ರ ನಡುವೆ 10,796 ರೂ. ಇಳಿಕೆಯಾಗಿದೆ. ನ.20ರಂದು ಒಂದೇ ದಿನ 6,401 ರೂ. ಕುಸಿದಿರುವುದು ಚಿನ್ನದ ಮಾರುಕಟ್ಟೆಯ ಹೊಯ್ದಾಟದ ತೀವ್ರತೆಯನ್ನು ತೋರಿಸುತ್ತದೆ. ಇದು ಸಣ್ಣ ಕರೆಕ್ಷನ್ ಅಲ್ಲ. ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಹಣ ಚಿನ್ನದ ಮಾರುಕಟ್ಟೆಯಿಂದ ಹೊರಹೋಗಿದ್ದು, ಜಾಗತಿಕ ಆರ್ಥಿಕ ಬೆಳವಣಿಗೆಗಳು ಚಿನ್ನದ ದರದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದಕ್ಕೆ ಸಾಕ್ಷಿ.
ಚಿನ್ನದ ಬೆಲೆ ಈಗ ಯಾವ ಹಂತದಲ್ಲಿದೆ ಎಂಬುದು ಮುಂದಿನ ಕುಸಿತದ ಪ್ರಮಾಣವನ್ನು ನಿರ್ಧರಿಸಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, 10 ಗ್ರಾಂ ಚಿನ್ನಕ್ಕೆ 1,22,000ದಿಂದ 1,22,800 ರೂ. ನಡುವಿನ ಮಟ್ಟ ಪ್ರಮುಖ ಬೆಂಬಲ ವಲಯವಾಗಿದೆ. ಅಂದರೆ ಈ ಬೆಲೆ ವ್ಯಾಪ್ತಿಯಲ್ಲಿ ಖರೀದಿದಾರರು ಮತ್ತೆ ಸಕ್ರಿಯರಾಗುವ ಸಾಧ್ಯತೆ ಇದೆ. ಈ ಮಟ್ಟದಲ್ಲಿ ಚಿನ್ನದ ಬೆಲೆ ಸ್ಥಿರಗೊಂಡು ಖರೀದಿ ಹೆಚ್ಚಾದರೆ ಕುಸಿತಕ್ಕೆ ತಾತ್ಕಾಲಿಕ ತಡೆ ಬೀಳಬಹುದು. ಆದರೆ ಈ ಬೆಂಬಲ ವಲಯವನ್ನು ಮುರಿದು ಬೆಲೆ ಕೆಳಕ್ಕೆ ಹೋದರೆ ಮತ್ತಷ್ಟು ಕುಸಿತಕ್ಕೆ ದಾರಿ ತೆರೆಯಬಹುದು. ಮುಂದಿನ ಬೆಂಬಲ ಮಟ್ಟ 1,18,000ರಿಂದ 1,19,000 ರೂ. ವ್ಯಾಪ್ತಿಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಮತ್ತೊಂದು ವಿಶ್ಲೇಷಣೆ ಪ್ರಕಾರ, ಚಿನ್ನದ ಬೆಲೆ 1,17,500 ರೂ.ವರೆಗೂ ಇಳಿಯುವ ಸಾಧ್ಯತೆಯಿದೆ. ಹೀಗಾಗಿ ಈಗಿನ ಮಟ್ಟದಲ್ಲಿ ಬೆಲೆ ಸ್ಥಿರವಾಗುತ್ತದೆಯೇ ಅಥವಾ ಮತ್ತಷ್ಟು ಕುಸಿಯುತ್ತದೆಯೇ ಎಂಬುದನ್ನು ಹೂಡಿಕೆದಾರರು ಗಮನಿಸುತ್ತಿದ್ದಾರೆ.
1. ಅಮೆರಿಕದ ಬಡ್ಡಿದರ ಏರಿಕೆ ಭೀತಿ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಬಹುದು ಎಂಬ ನಿರೀಕ್ಷೆಯೇ ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ. ಈ ಹಿಂದೆ ಅಮೆರಿಕದಲ್ಲಿ ಬಡ್ಡಿದರ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಈಗ ಹಣದುಬ್ಬರದ ಒತ್ತಡದ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆಯ ಸಾಧ್ಯತೆ ಚರ್ಚೆಯಲ್ಲಿದೆ. ಬಡ್ಡಿದರ ಹೆಚ್ಚಾದರೆ ಬ್ಯಾಂಕ್ ಠೇವಣಿ, ಬಾಂಡ್ಗಳು ಸೇರಿದಂತೆ ಬಡ್ಡಿ ನೀಡುವ ಹೂಡಿಕೆಗಳ ಆಕರ್ಷಣೆ ಹೆಚ್ಚುತ್ತದೆ. ಚಿನ್ನ ಯಾವುದೇ ಬಡ್ಡಿ ನೀಡದಿರುವುದರಿಂದ ಹೂಡಿಕೆದಾರರು ಚಿನ್ನದಿಂದ ಹಣ ಹಿಂಪಡೆದು ಬಡ್ಡಿ ಸಿಗುವಲ್ಲಿ ಹೂಡಿಕೆ ಮಾಡಲು ಮುಂದಾಗಬಹುದು. ಈ ಬದಲಾವಣೆ ಚಿನ್ನದ ಬೇಡಿಕೆ ಕುಸಿಯಲು ಕಾರಣವಾಗುತ್ತದೆ. ಡಿ. 8-9ರ ಫೆಡ್ ಸಭೆಯ ನಿರ್ಧಾರ ಪ್ರಮುಖವಾಗಿದ್ದು, ಅದರಿಂದಲೂ ಚಿನ್ನದ ಬೆಲೆಯ ಭವಿಷ್ಯ ನಿರ್ಧಾರವಾಗಲಿದೆ.
2. ಬಲಗೊಳ್ಳುತ್ತಿರುವ ಡಾಲರ್: ಅಮೆರಿಕದ ಡಾಲರ್ ಮೌಲ್ಯ ಹೆಚ್ಚುತ್ತಿರುವುದು ಚಿನ್ನದ ಬೆಲೆ ಕುಸಿತಕ್ಕೆ ಮತ್ತೊಂದು ಕಾರಣ. ಚಿನ್ನದ ಅಂತಾರಾಷ್ಟ್ರೀಯ ವಹಿವಾಟು ಡಾಲರ್ನಲ್ಲಿ ನಡೆಯುವುದರಿಂದ ಡಾಲರ್ ಬಲಗೊಂಡಾಗ ಇತರ ಕರೆನ್ಸಿಗಳಲ್ಲಿ ಚಿನ್ನ ಖರೀದಿಸುವುದು ದುಬಾರಿಯಾಗುತ್ತದೆ. ಹಾಗಾಗಿ ಬೇಡಿಕೆ ಕುಗ್ಗುತ್ತದೆ. ಇತ್ತೀಚೆಗೆ ಡಾಲರ್ 19 ತಿಂಗಳ ಗರಿಷ್ಠ ಮಟ್ಟ ತಲುಪಿದ್ದು, ಅಮೆರಿಕದ ಸರ್ಕಾರಿ ಬಾಂಡ್ಗಳ ಇಳುವರಿಯೂ ಹೆಚ್ಚಾಗಿದೆ. ಹೀಗಾದಾಗ ಹೂಡಿಕೆದಾರರು ಚಿನ್ನಕ್ಕಿಂತ ಬಾಂಡ್ಗಳಲ್ಲಿ ಹಣ ಹೂಡುತ್ತಾರೆ. ಚಿನ್ನಕ್ಕೆ ಬೇಡಿಕೆ ಕಡಿಮೆಯಾಗುತ್ತದೆ.
3. ರೂಪಾಯಿ ಮೌಲ್ಯ ಸುಧಾರಣೆ: ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತವೂ ಭಾರತದಲ್ಲಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಭಾರತ ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದರಿಂದ ರೂಪಾಯಿ ದುರ್ಬಲವಾದರೆ ಆಮದು ವೆಚ್ಚ ಹೆಚ್ಚುತ್ತದೆ. ರೂಪಾಯಿ ಬಲಗೊಂಡರೆ ಚಿನ್ನದ ಆಮದು ವೆಚ್ಚ ಕಡಿಮೆಯಾಗುತ್ತದೆ. ಇತ್ತೀಚೆಗೆ ರೂಪಾಯಿ ಮೌಲ್ಯ ಸುಧಾರಿಸಿರುವುದು ದೇಶೀಯ ಚಿನ್ನದ ಬೆಲೆ ಇಳಿಕೆಗೆ ಮತ್ತಷ್ಟು ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯುತ್ತಿರುವಾಗ ರೂಪಾಯಿ ಮೌಲ್ಯ ಹೆಚ್ಚಳವೂ ಸೇರಿರುವುದರಿಂದ ಭಾರತದಲ್ಲಿ ಬೆಲೆ ಇಳಿಕೆ ತೀವ್ರವಾಗಿದೆ.
ಚಿನ್ನದ ಬೆಲೆ 1.17 ಲಕ್ಷ ರೂ. ಮಟ್ಟಕ್ಕೆ ಇಳಿಯುವ ಸಾಧ್ಯತೆ ಯನ್ನು ತಳ್ಳಿಹಾಕುವಂತಿಲ್ಲ. ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್ಗೆ 3,500 ಡಾಲರ್ ಪ್ರಮುಖ ಬೆಂಬಲವಾಗಿದೆ. ಈ ಮಟ್ಟದಿಂದ ಕೆಳಗೆ ಕುಸಿದರೆ 3,300 ಡಾಲರ್ ಕಡೆ ಸಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಬೆಲೆ ಮತ್ತಷ್ಟು ಕುಸಿದರೆ ಭಾರತದ ಮಾರುಕಟ್ಟೆಯಲ್ಲೂ ಚಿನ್ನ 1,17,500 ರೂ. ಆಸುಪಾಸಿಗೆ ತಲುಪಬಹುದು. ಇನ್ನೊಂದು ವಿಶ್ಲೇಷಣೆಯಲ್ಲಿ ಅಂತಾರಾಷ್ಟ್ರೀಯ ಚಿನ್ನದ ಬೆಲೆ 3,200 ಡಾಲರ್ ಮಟ್ಟಕ್ಕೆ ಇಳಿದರೆ ಭಾರತದಲ್ಲಿ 1.11 ಲಕ್ಷ ರೂ. ತಲುಪಬಹುದು.
ಚಿನ್ನದ ಬೆಲೆ 1 ಲಕ್ಷ ರೂ.ಗೆ ಇಳಿಯುವ ಪ್ರಶ್ನೆ ಈಗ ಹೆಚ್ಚು ಚರ್ಚೆಯಾಗುತ್ತಿದೆ. ಸದ್ಯದ ಬೆಲೆ ಸುಮಾರು 1.23 ಲಕ್ಷ ರೂ. ಇರುವುದರಿಂದ 1 ಲಕ್ಷ ರೂ. ತಲುಪಬೇಕಾದರೆ ಇನ್ನೂ ಸುಮಾರು 23 ಸಾವಿರ ರೂ. ಇಳಿಯಬೇಕು. ಇದು ಸಣ್ಣ ಪ್ರಮಾಣ ಅಲ್ಲ. ಅಮೆರಿಕದ ಬಡ್ಡಿದರ ನಿರಂತರವಾಗಿ ಹೆಚ್ಚಳವಾಗುವುದು, ಡಾಲರ್ ಮತ್ತಷ್ಟು ಬಲಗೊಳ್ಳುವುದು, ಜಾಗತಿಕ ಹೂಡಿಕೆದಾರರು ಚಿನ್ನದಿಂದ ಹಣ ಹಿಂಪಡೆಯುವುದು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರ ಕುಸಿತ ಕಾಣುವುದು ಇಂತಹ ಪರಿಸ್ಥಿತಿಗೆ ಕಾರಣವಾಗಬಹುದು. ಆದರೆ ಸದ್ಯ ತಜ್ಞರು ಗುರುತಿಸಿರುವ ಬೆಂಬಲ ಮಟ್ಟಗಳು 1.17 ಲಕ್ಷದಿಂದ 1.19 ಲಕ್ಷ ರೂ. ವ್ಯಾಪ್ತಿಯಲ್ಲಿವೆ. ಹೀಗಾಗಿ 1 ಲಕ್ಷ ರೂ. ಮಟ್ಟಕ್ಕೆ ಇಳಿಯುವುದು ತಕ್ಷಣ ಸಾಧ್ಯವಾಗದು.
ಚಿನ್ನದ ಬೆಲೆ ಸತತವಾಗಿ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಚಿನ್ನ ಅತಿಯಾಗಿ ಮಾರಾಟವಾಗಿದೆ ಎಂಬ ಅಭಿಪ್ರಾಯವೂ ಇದೆ. ತಾಂತ್ರಿಕ ವಿಶ್ಲೇಷಣೆಯಲ್ಲಿ ಚಿನ್ನದ ಆರ್ಎಸ್ಐ (ರಿಲೇಟಿವ್ ಸ್ಟ್ರೆಂಥ್ ಇಂಡೆಕ್ಸ್) ಸುಮಾರು 17ರ ಮಟ್ಟದಲ್ಲಿದೆ. ಸಾಮಾನ್ಯವಾಗಿ ಆರ್ಎಸ್ಐ 30ಕ್ಕಿಂತ ಕೆಳಗಿದ್ದರೆ ಅದು ಅತಿಯಾಗಿ ಮಾರಾಟವಾಗಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ಬೆಲೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈಗಾಗಲೇ ಬೆಲೆ ಸಾಕಷ್ಟು ಕುಸಿದಿರುವುದರಿಂದ ಕಡಿಮೆ ಬೆಲೆಯಲ್ಲಿ ಖರೀದಿಸಲು ಬಯಸುವ ಹೂಡಿಕೆದಾರರು ಮಾರುಕಟ್ಟೆಗೆ ಪ್ರವೇಶಿಸಬಹುದು. ಇದರಿಂದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಅಮೆರಿಕದ ಹಣದುಬ್ಬರ ಕಡಿಮೆಯಾದರೆ, ಬಡ್ಡಿದರ ಏರಿಕೆ ಭೀತಿ ತಗ್ಗಬಹುದು. ಇದರಿಂದ ಚಿನ್ನದ ಬೆಲೆ ಚೇತರಿಸಿಕೊಳ್ಳಲು ಅವಕಾಶ ಸಿಗಬಹುದು.
ಚಿನ್ನದ ಬೆಲೆ ಇಳಿಕೆಯಿಂದ ಮದುವೆ ಮತ್ತಿತರ ಕಾರಣಕ್ಕಾಗಿ ಆಭರಣ ಖರೀದಿಗೆ ಸಿದ್ಧರಾಗಿರುವ ಕುಟುಂಬಗಳಿಗೆ ಕೊಂಚ ನಿರಾಳತೆ ಸಿಕ್ಕಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಪ್ರತಿ 10 ಗ್ರಾಂಗೆ 22 ಸಾವಿರ ರೂ. ಕಡಿಮೆಯಾಗಿರುವುದು ಗಮನಾರ್ಹ ಉಳಿತಾಯದ ಅವಕಾಶವಾಗಿದೆ. ಆದರೆ ಈಗಲೇ ಸಂಪೂರ್ಣ ಹಣ ಹೂಡಿಕೆ ಮಾಡಿ ಚಿನ್ನ ಖರೀದಿಸುವುದು ಸೂಕ್ತವೇ? ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಕೆಲವರು ಖರೀದಿಯನ್ನು ಹಂತ ಹಂತವಾಗಿ ಮಾಡಬಹುದು. ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಬದಲು ಅಗತ್ಯಕ್ಕೆ ಅನುಗುಣವಾಗಿ ಸ್ವಲ್ಪ ಸ್ವಲ್ಪ ಖರೀದಿಸುವವರಿಗೆ ಬೆಲೆ ಏರಿಳಿತದ ಅಪಾಯ ಕಡಿಮೆ. ಆಭರಣ ಖರೀದಿಸುವವರು ಮಾರುಕಟ್ಟೆ ದರ ಮಾತ್ರ ಗಮನಿಸದೆ, ಮೇಕಿಂಗ್ ಚಾರ್ಜ್, ಜಿಎಸ್ಟಿ, ಮಳಿಗೆಯ ದರಗಳನ್ನೂ ನೋಡಬೇಕು.
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ನಿರ್ಧಾರವಾಗುವಲ್ಲಿ ಅಮೆರಿಕದ ಫೆಡ್ ಬಡ್ಡಿದರ ನೀತಿ, ಹಣದುಬ್ಬರದ ಅಂಕಿಅಂಶಗಳು, ಡಾಲರ್ ಮೌಲ್ಯ, ಬಾಂಡ್ ಇಳುವರಿ, ರೂಪಾಯಿ ಮೌಲ್ಯ ಮತ್ತು ಜಾಗತಿಕ ರಾಜಕೀಯ ಬೆಳವಣಿಗೆಗಳು ಪ್ರಮುಖ ಪಾತ್ರ ವಹಿಸಲಿವೆ. ಫೆಡ್ ಬಡ್ಡಿದರ ಏರಿದರೆ ಚಿನ್ನದ ಮೇಲೆ ಒತ್ತಡ ಮುಂದುವರಿಯುತ್ತದೆ. ಚಿನ್ನದ ಬೆಲೆ ಈಗ 14 ತಿಂಗಳ ಕನಿಷ್ಠ ಮಟ್ಟದಲ್ಲಿದೆ. 1.17 ಲಕ್ಷ ರೂ.ವರೆಗೂ ಕುಸಿಯುವ ಸಾಧ್ಯತೆ ಇದ್ದರೂ, 1 ಲಕ್ಷ ರೂ. ತಲುಪುವುದು ಸದ್ಯಕ್ಕೆ ಇನ್ನಷ್ಟು ದೊಡ್ಡ ಕುಸಿತವನ್ನು ಅವಲಂಬಿಸಿದೆ. ಇಲ್ಲಿಂದಲೇ ಚೇತರಿಕೆ ಆರಂಭವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಚಿನ್ನದ ಭವಿಷ್ಯವನ್ನು ಮುಂದಿನ ಕೆಲವು ವಾರಗಳ ಬೆಳವಣಿಗೆಗಳು ನಿರ್ಧರಿಸಲಿವೆ.