ಪಾಕಿಸ್ತಾನಕ್ಕೆ ನೀರನ್ನು ಬಿಡುವುದಿಲ್ಲ: ಸಿಂಧೂ ನದಿ ಒಪ್ಪಂದಲ್ಲಿ ಯಾವುದೇ ಬದಲಾವಣೆ ಇಲ್ಲ; ವಿದೇಶಾಂಗ ಇಲಾಖೆ ಸ್ಪಷ್ಟನೆ! Indus Waters Treaty

MEA Spokesperson Randhir Jaiswal clarifies India stand on Indus Waters Treaty
ಸಿಂಧೂ ನದಿ ನೀರು ಒಪ್ಪಂದದ ಕುರಿತು ಭಾರತದ ನಿಲುವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.
Published on: 

ನವದೆಹಲಿ: ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಎಸ್‌ಸಿಒ ಸಿವಿಲೈಸೇಶನಲ್ ಡೈಲಾಗ್ ಫೋರಮ್​ನಲ್ಲಿ ಭಾಗವಹಿಸಲು ದೆಹಲಿಗೆ ಬಂದಿಳಿದಿದ್ದಾರೆ. ಈ ಬೆನ್ನಲ್ಲೇ, ಸಿಂಧೂ ನದಿಯ ಬಗ್ಗೆ ಏನೋ ಚರ್ಚೆ ನಡೆಯಲಿದೆ ಎಂಬ ಸುದ್ದಿ ಕೇಳಿಬಂದಿತ್ತು.

ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸಿಂಧೂ ನದಿ ನೀರು ಒಪ್ಪಂದದ ವಿಚಾರದಲ್ಲಿ ತನ್ನ ನಿಲುವು ಬಹಳ ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಶುಕ್ರವಾರ (ನ.20) ದೆಹಲಿಗೆ ಆಗಮಿಸಿದ ಪಾಕ್ ಸಚಿವ ಮಲಿಕ್, ಸಂಜೆ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ನಡೆದ ಮೂರು ದಿನಗಳ ಈ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ನಿಯಮದಂತೆ ಪಾಕಿಸ್ತಾನ ಸೇರಿದಂತೆ ಎಲ್ಲಾ ಎಸ್‌ಸಿಒ (SCO) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ ಎಂದು ಭಾರತ ಅಕ್ಟೋಬರ್ 28 ರಂದು ತಿಳಿಸಿತ್ತು. ಕಳೆದ ವರ್ಷ ಆಪರೇಷನ್ ಸಿಂದೂರ್ ಬಳಿಕ ಮೇ 7 ರಿಂದ 10 ರವರೆಗೆ ನಡೆದ ಮಿಲಿಟರಿ ಸಂಘರ್ಷಗಳ ನಂತರ, ಪಾಕಿಸ್ತಾನದ ಸಚಿವರೊಬ್ಬರನ್ನು ಭಾರತದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಭಾರತ ಹೇಳಿದ್ದೇನು?

ಶುಕ್ರವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಅವರಿಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳಲಾಯಿತು. ಮಲಿಕ್ ಅವರು ಸಂಸ್ಕೃತಿ ಖಾತೆ ಸಚಿವರಲ್ಲದಿದ್ದರೂ ಮತ್ತು ಈ ಹಿಂದೆ ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಹೇಳಿಕೆಗಳನ್ನು ನೀಡಿದ್ದರೂ, ಈ ವೇದಿಕೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಭಾರತ ಹೇಗೆ ನೋಡುತ್ತದೆ ಎಂದು ಪತ್ರಕರ್ತರು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜೈಸ್ವಾಲ್, ಸಿಂಧೂ ನದಿ ನೀರು ಒಪ್ಪಂದದ ವಿಷಯಕ್ಕೆ ಬಂದರೆ, ನಮ್ಮ ನಿಲುವನ್ನು ನಾವು ಮೊದಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ ಮತ್ತು ಅದು ಈಗಲೂ ಹಾಗೆಯೇ ಇದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಈ ಘಟನೆಯ ನಂತರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತವು ಈ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಈಗ ಮಲಿಕ್ ಅವರ ದೆಹಲಿ ಭೇಟಿಯನ್ನು, ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸಲು ಸಿಕ್ಕಿರುವ ಒಂದು ಬಹುಪಕ್ಷೀಯ ವೇದಿಕೆಯ ಅವಕಾಶ ಎಂದು ಕೆಲವು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Also Read
ಹಾಲಿವುಡ್​ ಗೇಮ್​​ನಲ್ಲಿ ಬೆಂಗಾಲಿ ಸಂಗೀತ​: GTA 6 ನಲ್ಲಿ ಮೊಳಗಿದ 'ಆಜ್​​​ ಶನಿವಾರ್​'! ವಿಡಿಯೋ ವೈರಲ್​|Aaj Shanibaar
MEA Spokesperson Randhir Jaiswal clarifies India stand on Indus Waters Treaty

ಭಯೋತ್ಪಾದನೆ ಪ್ರಶ್ನೆಗೆ ನುಣುಚಿಕೊಂಡ ಪಾಕ್ ಸಚಿವ!

ಕಾರ್ಯಕ್ರಮದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕ್ ಸಚಿವ ಮುಸಾದಿಕ್ ಮಲಿಕ್ ಅವರಿಗೆ, ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತಕ್ಕಿರುವ ಆತಂಕದ ಕುರಿತು ಪ್ರಶ್ನೆ ಎದುರಾಯಿತು. ಇದಕ್ಕೆ ನೇರ ಉತ್ತರ ನೀಡಲು ತಡಬಡಾಯಿಸಿದ ಮಲಿಕ್, ನಾನು ನಾಳೆ ನನ್ನ ಹೇಳಿಕೆಯನ್ನು ನೀಡಿದ ನಂತರ, ನಾವು ಸಾಕಷ್ಟು ಚರ್ಚೆಗಳನ್ನು ನಡೆಸಲಿದ್ದೇವೆ ಎಂದು ಭಾವಿಸುತ್ತೇನೆ ಎನ್ನುತ್ತಾ ವಿಷಯಾಂತರ ಮಾಡಿದರು.

ಭಯೋತ್ಪಾದನೆ ಬಗ್ಗೆ ಮಾತನಾಡುವ ಬದಲು, ಈ ಭಾಗದ ದೇಶಗಳ ನಡುವೆ ಮಾತುಕತೆ ನಡೆಯುವುದು ಮುಖ್ಯ ಎಂದು ಮಲಿಕ್ ಹೇಳಿದರು. ಬದಲಾಗುತ್ತಿರುವ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ಎಸ್‌ಸಿಒ ವೇದಿಕೆಯು ಒಂದು ಒಳ್ಳೆಯ ಹೆಜ್ಜೆ ಎಂದು ಅವರು ಬಣ್ಣಿಸಿದರು.

ಭಾರತ-ಪಾಕಿಸ್ತಾನ ಸಂಬಂಧಗಳ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಅವರು, ದೇಶಗಳು ಕೇವಲ ತಮ್ಮ ನಡುವಿನ ವಿವಾದಗಳನ್ನಷ್ಟೇ ನೋಡದೆ, ಈ ಭಾಗದ ಸಾಮಾನ್ಯ ರಾಜಕೀಯ ಮತ್ತು ಸಾಮಾಜಿಕ ಸವಾಲುಗಳನ್ನು ಬಗೆಹರಿಸಲು ವಿಶಾಲ ಮನೋಭಾವ ಹೊಂದಬೇಕು ಎಂದು ಅಭಿಪ್ರಾಯಪಟ್ಟರು. ವಿಭಿನ್ನ ದೃಷ್ಟಿಕೋನಗಳು ಒಗ್ಗೂಡಿದಾಗ ಮಾತ್ರ ಉತ್ತಮ ಸಂವಾದ ಸಾಧ್ಯ ಎಂದು ಮಲಿಕ್ ಹೇಳಿದ್ದಾರೆ, (ಏಜೆನ್ಸೀಸ್​).