

Jantar Mantar Protest: ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿತ್ತು. ಈ ಪ್ರತಿಭಟನೆಯು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಪ್ರಮುಖ ನಾಯಕರಾದ ರಾಂಕಾ, ದಾಸ್ ಸೇರಿದಂತೆ ಹಲವು ವಿರೋಧ ಪಕ್ಷದ ಪ್ರಮುಖ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂತರ್ ಮಂತರ್ ಬಳಿ ನಡೆಯಬೇಕಿದ್ದ ಈ ಬೃಹತ್ ಪ್ರತಿಭಟನಾ ಸಭೆಯನ್ನು ತಡೆಯಲು ಪೊಲೀಸರು ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಮುಂಜಾಗೃತಾ ಕ್ರಮವಾಗಿ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ವಿಷಯವಾಗಿ ಮಾತನಾಡಿರುವ ಸಿಜೆಪಿ, ಬಂಧನಗಳಿಂದ ತಾವು ಕಂಗೆಟ್ಟಿಲ್ಲ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಅಥವಾ ಅವರನ್ನು ಹುದ್ದೆಯಿಂದ ತೆಗೆದುಹಾಕುವವರೆಗೆ ಪ್ರತಿದಿನ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಾಗಿ ಜಮಾಯಿಸುವಂತೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮ ಕೈಗೊಂಡಿದ್ದಾರೆ. ಈ ನಡುವೆಯೂ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ತಮ್ಮ ನಾಯಕತ್ವ ಹಾಗೂ ನೂರಾರು ಬೆಂಬಲಿಗರು ವಶದಲ್ಲಿರುವಾಗಲೇ ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪೊಲೀಸರ ಈ ಕ್ರಮವನ್ನು ಮುಗ್ಧ ಪ್ರತಿಭಟನಾಕಾರರ ಕ್ರೂರ ಹಿಂಸೆ ಎಂದು ಸಿಜೆಪಿ ನಾಯಕರು ಖಂಡಿಸಿದ್ದಾರೆ.
ಬೆಳಿಗ್ಗೆ 10.19 ನಿಮಿಷಕ್ಕೆ ಮುಂಬೈನಿಂದ ದೆಹಲಿಗೆ ಬಂದ ವಿಮಾನದ ಒಳಗಿನಿಂದಲೇ ಪೊಲೀಸರು ಅಭಿಜಿತ್ ದೀಪ್ಕೆ ಹಾಗೂ ಇತರರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಸ್ಪಷ್ಟ ಮಾಹಿತಿ ತಮಗೆ ಲಭ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಂದೇ ಬೆಳಿಗ್ಗೆ ಮಹಾರಾಷ್ಟ್ರದ ತಮ್ಮ ಸ್ವಗ್ರಾಮದಲ್ಲಿ ಅಜ್ಜಿ ನಿಧನರಾಗಿದ್ದರೂ ಸಹ, ಅವರ ಅಂತ್ಯಸಂಸ್ಕಾರಕ್ಕೆ ತೆರಳಲು ಅವಕಾಶ ನೀಡದೆ ಅಭಿಜಿತ್ ದೀಪ್ಕೆ ಅವರೊಂದಿಗೆ ಪೊಲೀಸರು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (SFI) ಪ್ರಧಾನ ಕಾರ್ಯದರ್ಶಿ ಸೃಜನ್ ಭಟ್ಟಾಚಾರ್ಯ, ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಎಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ನೀಡಿದ್ದಾರೆ. ಭಾನುವಾರದಿಂದಲೇ ವಿದ್ಯಾರ್ಥಿಗಳ ಈ ಪ್ರತಿಭಟನಾ ಅಲೆ ದೇಶದ ಮೂಲೆ ಮೂಲೆಗೂ ಹಬ್ಬಲಿದೆ ಎಂದು ತಿಳಿಸಿರುವ ಅವರು, ವಿದ್ಯಾರ್ಥಿಗಳು ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದಿದ್ದಾರೆ. ಅಲ್ಲದೆ, ಪೊಲೀಸರು ಎಲ್ಲಿ ಬ್ಯಾರಿಕೇಡ್ ಹಾಕಿ ನಮ್ಮನ್ನು ತಡೆಯುತ್ತಾರೋ, ಆ ತಡೆಗೋಡೆ ಇರುವ ಜಾಗವೇ ನಮ್ಮ ಪಾಲಿಗೆ ಜಂತರ್ ಮಂತರ್ ಆಗಿ ಬದಲಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜನರ ಮತದಾನದ ಹಕ್ಕುಗಳನ್ನು ರಕ್ಷಿಸುವ ನಿರಂತರ ಹೋರಾಟದ ಭಾಗವಾಗಿ, ಇಂಡಿಯಾ ಒಕ್ಕೂಟವು ಸೋಮವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಶನಿವಾರ (ಅ.10) ತಿಳಿಸಿದ್ದಾರೆ.
ಮತಕಳ್ಳತನ ಕುರಿತ ತಮ್ಮ ಆರೋಪಗಳನ್ನು ಮುಂದಿಟ್ಟುಕೊಂಡು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲು ಹಾಗೂ ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭೆ ಚುನಾವಣೆಗಳನ್ನು ರದ್ದುಪಡಿಸುವಂತೆ ಕೋರಿ ಇಂಡಿಯಾ ಒಕ್ಕೂಟದ ನಾಯಕರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು(ಏಜೆನ್ಸೀಸ್).