​3,000ಕ್ಕೂ ಹೆಚ್ಚು ಹೋಟೆಲ್‌ಗೆ ನುಗ್ಗಿ ರೇಡ್​ ಮಾಡಿರುವ 'ಮಹಾ ಸಿಂಗಂ' ರಾಜಕೀಯಕ್ಕೆ ಎಂಟ್ರಿ? ಐಎಎಸ್ ಅಧಿಕಾರಿ ಕೊಟ್ಟ ಉತ್ತರ ವೈರಲ್​ | Tukaram Mundhe

ಮಹಾರಾಷ್ಟ್ರದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಐಎಎಸ್ ಅಧಿಕಾರಿ ತುಕಾರಾಂ ಮುಂಧೆ
ಮಹಾರಾಷ್ಟ್ರದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಐಎಎಸ್ ಅಧಿಕಾರಿ ತುಕಾರಾಂ ಮುಂಧೆ
Published on

ಪ್ರಮುಖ ಮುಖ್ಯಾಂಶಗಳು

  • 21 ವರ್ಷಗಳ ವೃತ್ತಿಜೀವನದಲ್ಲಿ ಬರೋಬ್ಬರಿ 25 ಬಾರಿ ಟ್ರಾನ್ಸ್​ಫರ್
  • ಜನಸಾಮಾನ್ಯರು ಮೆಚ್ಚಿ, ಕೊಂಡಾಡುವಂತೆ ಬದುಕುತ್ತಿರುವ ಮಹಾರಾಷ್ಟ್ರದ ಸಿಂಗಂ
  • ಐಎಎಸ್ ಅಧಿಕಾರಿ ತುಕಾರಾಂ ಮುಂಧೆ ಅವರ ಉತ್ತರವೊಂದು ಜಾಲತಾಣಗಳಲ್ಲಿ ಸಖತ್ ವೈರಲ್​
ಮುಂಬೈ: 21 ವರ್ಷಗಳ ಕರಿಯರ್​ನಲ್ಲಿ ಬರೋಬ್ಬರಿ 25 ಬಾರಿ ಟ್ರಾನ್ಸ್​ಫರ್​ ಆದರೂ ಸಹ ಕೆಲಸದಲ್ಲಿ ಯಾವುದಕ್ಕೂ ರಾಜಿಯಾಗದೆ, ಯಾವ ಆಮಿಷಗಳಿಗೂ ಬಗ್ಗದೆ ಜನಸಾಮಾನ್ಯರು ಮೆಚ್ಚಿ, ಕೊಂಡಾಡುವಂತೆ ಬದುಕುತ್ತಿರುವ ಮಹಾರಾಷ್ಟ್ರದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಐಎಎಸ್ ಅಧಿಕಾರಿ ತುಕಾರಾಂ ಮುಂಧೆ (Tukaram Mundhe) ಅವರ ಉತ್ತರವೊಂದು ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಮೂಲಕ ಮತ್ತೊಮ್ಮೆ ಅವರು ಸುದ್ದಿಯಲ್ಲಿದ್ದಾರೆ. 
ತಮ್ಮ ಕಟ್ಟುನಿಟ್ಟಿನ ಕೆಲಸದ ಶೈಲಿಯಿಂದ ಇಂದಿಗೂ ಜನರ ಹೃದಯವನ್ನು ಗೆಲ್ಲುತ್ತಿರುವ ತುಕಾರಾಂ ಅವರು, ಪ್ರಸ್ತುತ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಆಯುಕ್ತರಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ನಗರದ ಹೋಟೆಲ್​, ರೆಸ್ಟೋರೆಂಟ್​ ಹಾಗೂ ಆಹಾರ ಉತ್ಪನ್ನಗಳ ತಯಾರಿಕ ಘಟಕಗಳ ಮೇಲೆ ರೇಡ್​ ಮಾಡುವ ಮೂಲಕ ಸರಣಿ ರಿಯಾಲಿಟಿ ಚೆಕ್​ಗಿಳಿದು, ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವ ಇವರ ನಡೆಯನ್ನು ಜನರು ಇಂದಿಗೂ ಕೊಂಡಾಡುತ್ತಾರೆ. ಇದೇ ಖುಷಿಯಲ್ಲಿ ಅವರು ರಾಜಕೀಯಕ್ಕೆ ಬರುವಂತೆ ಹಲವರು ಮನವಿ ಮಾಡಿದ್ದಾರೆ. ಇದಕ್ಕೆ ತುಕಾರಂ ಅವರು ಕೊಟ್ಟ ಉತ್ತರ ಸದ್ಯ ಚರ್ಚೆಗೆ ಗ್ರಾಸವಾಗಿದೆ.   
ಇತ್ತೀಚೆಗೆ ನಡೆದ ಎನ್​ಡಿಟಿವಿ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಅವರು, ರಾಜಕೀಯಕ್ಕೆ ಸೇರಲು ಅಥವಾ ಚುನಾವಣೆಗೆ ನಿಲ್ಲಲು ನೀವು ಎಂದಾದರೂ ಯೋಚಿಸಿದ್ದೀರಾ? ಹೋಗುವ ಮುನ್ಸೂಚನೆ ಇದೆಯಾ? ಎಂಬ ಪ್ರಶ್ನೆಗೆ, ನನ್ನನ್ನು ಕಾನೂನಿನ ಪರಿಪಾಲಕ ಮತ್ತು ಕಾನೂನಿನ ರಕ್ಷಕ ಎಂಬ ಇಮೇಜ್​ನಿಂದಲೇ ಜನ ನೋಡುತ್ತಿದ್ದಾರೆ. ನಾನು ತಪ್ಪನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತೇನೆ ಅನ್ನೋ ಒಂದು ಕಾರಣಕ್ಕೆ ರಾಜಕೀಯ ಪ್ರವೇಶಿಸುತ್ತೇನೆ ಎಂಬುದು ತಪ್ಪಾಗುತ್ತದೆ ಎಂದರು.
"ನನ್ನಂತಹ ನೇರ ನುಡಿಯ ವ್ಯಕ್ತಿಗಳನ್ನು ಖಂಡಿತ ರಾಜಕೀಯದಲ್ಲಿ ಒಪ್ಪಿಕೊಳ್ಳುವುದಿಲ್ಲ. ಯಾಕಂದರೆ, ಅನೇಕ ಜನರು ನನ್ನನ್ನು ಕೊಬ್ಬು, ದುರಂಹಕಾರದ ವ್ಯಕ್ತಿ ಎನ್ನುತ್ತಾರೆ. ಆದರೆ, ಅಸಲಿಗೆ ನಾನಲ್ಲ ಅದು. ಅವರಿಗೆ ಬಹುಶಃ ಸೊಕ್ಕು ಅನಿಸಬಹುದು. ಆದ್ರೆ, ನನ್ನ ಪ್ರಕಾರ, ನೇರ ನುಡಿ ಅಷ್ಟೇ. ಇಲ್ಲಿ, ನೇರ ನುಡಿಗೂ ಮತ್ತು ಸೊಕ್ಕಿಗೂ ಇರುವುದು ಒಂದು ಕೂದಲೆಳೆ ಅಂತರ. ನಾನಿರುವುದೇ ಹೀಗೆ. ಇದರಲ್ಲಿ, ಯಾವುದೇ ಡ್ರಾಮಾ ಅಥವಾ ನಟಿಸುವ ಅವಶ್ಯಕತೆ ಇಲ್ಲ ಎಂದು ಓಪನ್​ ಆಗಿ ಹೇಳಿದರು.  

'ಮಹಾ'ದಲ್ಲಿ 'ಮುಂಧೆ ಎಫೆಕ್ಟ್'​

ಕೊಳೆತ, ಅವಧಿ ಮೀರಿದ ಆಹಾರಗಳನ್ನು ಬಳಕೆ ಮಾಡುತ್ತಿರುವ  ರೆಸ್ಟೋರೆಂಟ್ ಮತ್ತು ಹೋಟೆಲ್​ಗಳನ್ನು ಪರಿಶೀಲನೆ ಮಾಡುವ ತುಕಾರಂ ಮುಂಧೆ, ಯಾವ ಹೋಟೆಲ್​ನವರು ಇಂತಹ ತಪ್ಪುಗಳಲ್ಲಿ ತೊಡಗಿ, ಆಹಾರ ನಿಯಮಗಳನ್ನು ಉಲ್ಲಂಘಿಸಿ ತನ್ನ ಗ್ರಾಹಕರ ಕಣ್ಣಿಗೆ ಮಣ್ಣೆರಚಿರುವುದು ಸಾಬೀತಾದ ತಕ್ಷಣವೇ ಅಂತಹ ಹೋಟೆಲ್​ಗಳ ಲೈಸನ್ಸ್​ ರದ್ದುಗೊಳಿಸಿ, ಬೀಗ ಜಡಿಯುತ್ತಾರೆ. ಇವರ ಈ ಖಡಕ್​ ನಡೆಯನ್ನು ಮಹಾರಾಷ್ಟ್ರದ ಜನತೆ ಮುಂಧೆ ಎಫೆಕ್ಟ್​​ ಎಂದೇ ಕರೆಯುವುದು ವಿಶೇಷ. ಅವರ ಆಡಳಿತದ ಪವರ್​ ಈಗ ದೇಶವ್ಯಾಪಿ ಇತರೆ ರಾಜ್ಯಗಳಿಗೂ ಪ್ರೇರಣೆಯಾಗಿದ್ದು, ಆಯಾ ಆಹಾರ ಇಲಾಖೆಗಳು ತಮ್ಮ ರಾಜ್ಯಗಳಲ್ಲಿ ಬಿರುಸಿನ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿವೆ.    
ಈ ವರ್ಷದ ಮೇ.25 ಮತ್ತು ಜುಲೈ 31ರ ನಡುವೆ ಬರೋಬ್ಬರಿ 3,000ಕ್ಕೂ ಅಧಿಕ ಹೋಟೆಲ್‌, ರೆಸ್ಟೋರೆಂಟ್‌ಗಳು, ಆಹಾರ ತಯಾರಕ ಘಟಕಗಳು ಮತ್ತು ಇತರ ಸಂಸ್ಥೆಗಳನ್ನು ಆಹಾರ ಇಲಾಖೆ ವತಿಯಿಂದ ತುಕಾರಂ ಪರಿಶೀಲಿಸಿದ್ದಾರೆ. ಈಗಾಗಲೇ 165 ಕಂಪನಿಗಳ ಪರವಾನಗಿಯನ್ನು ಅಮಾನತುಗೊಳಿಸಿರುವ ಅವರು, 28.66 ಲಕ್ಷ ಕೆಜಿ ತೂಕದ ಮತ್ತು 55.72 ಕೋಟಿ ಮೌಲ್ಯದ ಅಸುರಕ್ಷಿತ ಆಹಾರ ಉತ್ಪನ್ನಗಳನ್ನು ವಶಕ್ಕೆ ಪಡೆದಿರುವುದು ನಿಜಕ್ಕೂ ಹುಬ್ಬೇರಿಸುವಂತ ವಿಷಯವೇ ಸರಿ.

ಯಾರು ಈ ತುಕಾರಂ ಮುಂಧೆ?

ತುಕಾರಾಂ ಮುಂಧೆ, ಜೂನ್ 3, 1975ರಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ತಡ್ಸೊನ್ನಾ ಗ್ರಾಮದಲ್ಲಿ ಜನಿಸಿದರು. ಸರಳ ಕೃಷಿ ಕುಟುಂಬದಲ್ಲಿ ಬೆಳೆದ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ. ಆರಂಭದಲ್ಲಿ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದಿದರು. ಬಳಿಕ, ಔರಂಗಾಬಾದ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಅವರ ಶೈಕ್ಷಣಿಕ ಹಿನ್ನೆಲೆಯು ಯುಜಿಸಿ-ಜೆಆರ್‌ಎಫ್/ನೆಟ್‌ನಂತಹ ಅರ್ಹತೆಗಳನ್ನು ಸಹ ಒಳಗೊಂಡಿದೆ ಎಂಬುದು ಗಮನಾರ್ಹ.
2005ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ ಮುಂಧೆ, ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಟ್ರೇನಿಂಗ್ ಪಡೆದರು. ಅವರು 2011ರಲ್ಲಿ ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿಕ್ಕಟ್ಟು, ತುರ್ತುಸ್ಥಿತಿ ಮತ್ತು ವಿಪತ್ತು ನಿರ್ವಹಣೆ ಕುರಿತು ವಿಶೇಷ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದರು. ತುಕಾರಾಮ್ ಮುಂಧೆ, ತಮ್ಮ 21 ವರ್ಷಗಳ ಕರಿಯರ್​ನಲ್ಲಿ ಬರೋಬ್ಬರಿ 25 ಬಾರಿ ವರ್ಗಾವಣೆಗಳನ್ನು ಎದುರಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಪಾರದರ್ಶಕತೆಗೆ ಒತ್ತು ನೀಡುವುದು ಮತ್ತು ನಿರ್ಧಾರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಅವರ ಕಾರ್ಯ ಶೈಲಿಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟಿದೆ. 
ಈ ವರ್ಷದ ಮೇನಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಆಹಾರ ಸುರಕ್ಷತೆಗೆ ವಿಶೇಷ ಹಾಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರಾಜ್ಯಾದ್ಯಂತ ಹೋಟೆಲ್​, ರೆಸ್ಟೋರೆಂಟ್‌ಗಳು, ಆಹಾರ ಉತ್ಪಾದನಾ ಘಟಕಗಳು ಮತ್ತು ವಿತರಣಾ ಕಂಪನಿಗಳಲ್ಲಿ ಚುರುಕಿನ ತಪಾಸಣೆ ಕೈಗೊಳ್ಳುತ್ತಿದ್ದಾರೆ. ತುಕಾರಾಮ್ ಮುಂಧೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಎಫ್‌ಡಿಎ 1,100ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ ಎಂಬುದು ಹುಬ್ಬೇರಿಸುವ ಸಂಗತಿ ಎನ್ನಬಹುದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net