ಈಗ ಇಡೀ ಭಾರತವೇ ನಿನ್ನನ್ನು ಪ್ರೀತಿಸುತ್ತದೆ!...ಚೈನೀಸ್ ಎನ್ನಬೇಡಿ ಎಂದಿದ್ದ ಬಾಲಕಿಗೆ ವಿಡಿಯೋ ಕಾಲ್ ಮಾಡಿದ ಕೇಂದ್ರ ಸಚಿವ ರಿಜಿಜು | Kiren Rijiju
Kiren Rijiju | ಈಗ ಇಡೀ ಭಾರತವೇ ನಿನ್ನನ್ನು ಪ್ರೀತಿಸುತ್ತದೆ!...ಚೈನೀಸ್ ಎನ್ನಬೇಡಿ ಎಂದಿದ್ದ ಬಾಲಕಿಗೆ ವಿಡಿಯೋ ಕಾಲ್ ಮಾಡಿದ ಕೇಂದ್ರ ಸಚಿವ ರಿಜಿಜು
Published on:
Copied
Follow Us
ಅರುಣಾಚಲ ಪ್ರದೇಶದ ಮೂಲದವರಾದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಇಂಡಿಯಾ ಟುಡೆ ಸಂದರ್ಶನದ ವೇಳೆ, ಚೈನೀಸ್ ಎಂದು ಕರೆಯುವುದನ್ನು ವಿರೋಧಿಸಿ ವೈರಲ್ ಆಗಿದ್ದ ಪುಟ್ಟ ಬಾಲಕಿ ಟಿಂಕ್ಲೆ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ವಿಡಿಯೋ ಭಾರೀ ಸಂಚಲನ ಮೂಡಿಸಿರುವುದನ್ನು ತಿಳಿದ ಸಚಿವರು, ಕೂಡಲೇ ಆಕೆಯೊಂದಿಗೆ ಮಾತನಾಡಲು ಒಪ್ಪಿಕೊಂಡರು. ವಿಡಿಯೋ ಕಾಲ್ನಲ್ಲಿ ರಿಜಿಜು ಅವರು ಹಿಂದಿಯಲ್ಲಿ ಮಾತನಾಡಿ ಬಾಲಕಿಯ ಪೋಷಕರ ಬಗ್ಗೆ ವಿಚಾರಿಸಿದರು. ನಿಮ್ಮ ತಾಯಿ ಎಲ್ಲಿದ್ದಾರೆ..? ನಿಮ್ಮ ತಾಯಿಯ ಫೋಟೋ ತೋರಿಸಿ. ನಿಮ್ಮ ತಂದೆ ಎಲ್ಲಿದ್ದಾರೆ ಎಂದು ರಿಜಿಜು ಕೇಳಿದರು. ಆದರೆ ನೆಟ್‌ವರ್ಕ್ ದೋಷದಿಂದಾಗಿ ಬಾಲಕಿಗೆ ಸರಿಯಾಗಿ ಅರ್ಥವಾಗದೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದಾದ ಬಳಿಕ ಕಿರಣ್ ಅಂಕಲ್ ಕರೆ ಮಾಡಿದ್ದರು ಎಂದು ತನ್ನ ತಾಯಿಗೆ ತಿಳಿಸುವಂತೆ ರಿಜಿಜು ಹೇಳಿದರು.
ಬಾಲಕಿಯನ್ನು ರೇಗಿಸಿದವರು ಯಾರು ಎಂದ ಸಚಿವರು, ದೇಶದಾದ್ಯಂತ ಜನರು ಈಗ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ಧೈರ್ಯ ತುಂಬುತ್ತಾ, ಈಗ ಇಡೀ ಭಾರತ ನಿನ್ನನ್ನು ಪ್ರೀತಿಸುತ್ತದೆ. ಅಲ್ಲದೆ, ನೀನು ತುಂಬಾ ಪ್ರಸಿದ್ಧಳಾಗಿದ್ದೀಯಾ, ನಿನಗೆ ಗೊತ್ತಾ ಎಂದು ಪ್ರೀತಿಯಿಂದ ಪ್ರಶ್ನಿಸಿದರು.
ನಮಗೆ ಇಂಡಿಯನ್ ಎಂದು ಕರೆಯಿರಿ ಎಂದಿದ್ದ ಬಾಲಕಿ
ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಟಿಂಕ್ಲೆ, ತನ್ನನ್ನು ಚೈನೀಸ್..? ಎಂಬ ಪ್ರಶ್ನೆ ಸಿಟ್ಟು ಮತ್ತು ದುಃಖಕ್ಕೆ ಕಾರಣವಾಗಿದ್ದು ಏಕೆ ಎಂಬುದನ್ನು ಆ ಪುಟ್ಟ ಬಾಲಕಿ ಶಾಂತವಾಗಿ ವಿವರಿಸಿದ್ದಳು. ನಾವು ಭಾರತೀಯರು. ನೀವು ನಮಗೆ ಚೈನೀಸ್ ಎಂದು ಕರೆದರೆ ನಮಗೆ ತುಂಬಾ ಕೋಪ ಬರುತ್ತದೆ, ತುಂಬಾ ನೋವಾಗುತ್ತದೆ. ನಮಗೆ ಭಾರತೀಯ ಎಂದು ಕರೆಯಿರಿ. ನಾವು ಇಲ್ಲಿಯವರೇ, ಇಟಾನಗರದಲ್ಲಿ ವಾಸಿಸುತ್ತಿದ್ದೇವೆ ಎಂದು ಬಾಲಕಿ ಹೇಳಿದ್ದಳು.
ಈ ವಿಡಿಯೋ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಭಾರಿ ವೈರಲ್ ಆಗಿತ್ತು. ಈಶಾನ್ಯ ಭಾರತದ ಜನರ ಸ್ಟೀರಿಯೋಟೈಪಿಂಗ್ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದ್ದಕ್ಕಾಗಿ ಅನೇಕ ಬಳಕೆದಾರರು ಬಾಲಕಿಯನ್ನು ಶ್ಲಾಘಿಸಿದರು. ಬಾಹ್ಯ ನೋಟದ ಆಧಾರದ ಮೇಲೆ ತಮ್ಮ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ಈಶಾನ್ಯ ಭಾರತದ ಜನರ ದೊಡ್ಡ ಸಮಸ್ಯೆಯ ಮೇಲೂ ಆಕೆಯ ಪ್ರತಿಕ್ರಿಯೆ ಗಮನ ಸೆಳೆಯಿತು.
ಟಿಂಕ್ಲೆ ಸಂದೇಶವು ಸರಳವಾಗಿತ್ತು. ಅವಳು ಭಾರತೀಯಳು ಮತ್ತು ಹಾಗೆಯೇ ತನ್ನನ್ನು ಗುರುತಿಸಿಕೊಳ್ಳಲು ಬಯಸುತ್ತಾಳೆ. ಆದರೆ ಆಕೆಯ ಕೆಲವೇ ಕೆಲವು ಮಾತುಗಳು ಇದೇ ರೀತಿಯ ಧೋರಣೆಯನ್ನು ಎದುರಿಸಿದ ಅನೇಕರ ಮನಸ್ಸನ್ನು ತಟ್ಟಿತು. ಇದು ಗುರುತು ಮತ್ತು ಸೇರಿದವರೆಂಬ ಭಾವನೆಯ ಕುರಿತಾದ ವ್ಯಾಪಕ ಚರ್ಚೆಗೆ ಮುನ್ನುಡಿ ಬರೆಯಿತು. ಟಿಂಕ್ಲೆ ಜೊತೆಗಿನ ಈ ವಿಡಿಯೋ ಕಾಲ್ ರಿಜಿಜು ಅವರ ಗಂಭೀರ ಸಂದರ್ಶನಕ್ಕೆ ಮತ್ತಷ್ಟು ಲವಲವಿಕೆ ಹಾಗೂ ವೈಯಕ್ತಿಕ ಕ್ಷಣವನ್ನು ತಂದುಕೊಟ್ಟಿತು.
ಈ ಸಂಭಾಷಣೆಯ ಸಮಯದಲ್ಲಿ, ರಾಹುಲ್ ಗಾಂಧಿಯವರ ಸ್ಮ್ಯಾಶ್ ಪ್ಯಾಟ್ರಿಆರ್ಕಿ ಅಭಿಯಾನ, ಮನುಸ್ಮೃತಿ, ದಿಮಾಗಿ ನಕ್ಸಲ್ಸ್, ವಿದ್ಯಾರ್ಥಿ ಪ್ರತಿಭಟನೆಗಳು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಶೈಲಿ ಮತ್ತು ವಿರೋಧ ಪಕ್ಷಗಳೊಂದಿಗೆ ಬಿಜೆಪಿಯ ಒಡನಾಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೇಂದ್ರ ಸಚಿವರು ಚರ್ಚಿಸಿದರು(ಏಜೆನ್ಸೀಸ್).