ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಸಿಬಿಲ್​ ಸ್ಕೋರ್​ ಶುರು ಯಾವಾಗ? ಲೋನ್​ ಪಡೆಯದಿದ್ರೂ ಅಂಕಿಗಳು ಬದಲಾಗುತ್ತಾ? ಇಲ್ಲಿದೆ ಉತ್ತರ | CIBIL Score

ರಾಷ್ಟ್ರೀಕೃತ ಮತ್ತು ಪ್ರಾದೇಶಿಕ ಬ್ಯಾಂಕ್​ಗಳಲ್ಲಿ ಸಾಲ ಪಡೆಯುವ ಬದಲಿಗೆ ತಕ್ಷಣಕ್ಕೆ ಲೋನ್​ ಕೊಡುವ ಆ್ಯಪ್​ಗಳ ಮೊರೆ ಹೋಗುವ ಜನರು ತಾವು ಹೆಚ್ಚಿನ ಬಡ್ಡಿಗೆ ಹಣ ಪಡೆಯುತ್ತಿದ್ದೀವಿ ಎಂಬುದನ್ನೇ ಮರೆತುಹೋಗಿರುವುದು ದುರಂತ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಸಿಬಿಲ್​ ಸ್ಕೋರ್​ ಶುರು ಯಾವಾಗ? ಲೋನ್​ ಪಡೆಯದಿದ್ರೂ ಅಂಕಿಗಳು ಬದಲಾಗುತ್ತಾ? ಇಲ್ಲಿದೆ ಉತ್ತರ | CIBIL Score
Published on: 

CIBIL Score: ಈ ಡಿಜಿಟಲ್​ ಕಾಲದಲ್ಲಿ ಸಾಲ ಪಡೆಯುವವರ ಸಂಖ್ಯೆ ಹಿಂದಿಗಿಂತ ವೇಗವಾಗಿ ಹೆಚ್ಚಾಗಿದೆ. ಈ ಹಿಂದೆ ಬ್ಯಾಂಕ್‌ಗಳಲ್ಲಿ ಕ್ಯೂ ನಿಂತು, ಒಂದಷ್ಟು ದಿನಗಳ ಕಾಲ ಬ್ಯಾಂಕ್​ನಿಂದ ಮನೆಗೆ ಅಲೆದಾಡಿದ ಬಳಿಕವೇ ಸಾಲ ಸಿಗುತ್ತಿತ್ತು, ಆದರೀಗ, ಸಾಲ ಪಡೆಯಲು ಜನರು ಬ್ಯಾಂಕಿಗೆ ಹೋಗುವುದಕ್ಕಿಂತ ಲೋನ್​ ಕೊಡುವ ಬ್ಯಾಂಕ್‌ ಸಿಬ್ಬಂದಿಗಳೇ ಪದೇ ಪದೇ ಫೋನ್​ ಮಾಡಿ ಸಾಲ ತಗೋತೀರಾ ಎಂದು ಕೇಳುತ್ತಿದ್ದಾರೆ. ಇಷ್ಟೇ ಅಲ್ಲದೇ, ಸಾಕಷ್ಟು ಆನ್​ಲೈನ್​ ಲೋನ್​ ಆ್ಯಪ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇವುಗಳು ಗ್ರಾಹಕರು ಕುಳಿತ ಜಾಗದಿಂದಲೇ ಕೇಳಿದಷ್ಟು ಹಣವನ್ನು ಕೊಡಲು ಮುಂದಾಗಿರುವುದು ಸದ್ಯ ಸಾಲಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಇಂತಹ ಸಾಲಗಳನ್ನು ಕೊಡಲು ಕೇವಲ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಇದ್ದರೆ ಸಾಕು ಎನ್ನುತ್ತವೆ ಆಯಾ ಲೋನ್​ ಆ್ಯಪ್​ಗಳು. ಇದು ಜನರಿಗೆ ಅತ್ಯಂತ ಸುಲಭ ಹಾಗೂ ಸರಳ ಪ್ರಕ್ರಿಯೆ ಆದ ಕಾರಣ, ಬ್ಯಾಂಕಿಗೆ ಹೋಗಿ ಹೆಚ್ಚು ಸಮಯ ವ್ಯರ್ಥ ಮಾಡಿಕೊಂಡು ಕೂರಲು ಬಯಸುತ್ತಿಲ್ಲ. ರಾಷ್ಟ್ರೀಕೃತ ಮತ್ತು ಪ್ರಾದೇಶಿಕ ಬ್ಯಾಂಕ್​ಗಳಲ್ಲಿ ಸಾಲ ಪಡೆಯುವ ಬದಲಿಗೆ ತಕ್ಷಣಕ್ಕೆ ಲೋನ್​ ಕೊಡುವ ಆ್ಯಪ್​ಗಳ ಮೊರೆ ಹೋಗುವ ಜನರು ತಾವು ಹೆಚ್ಚಿನ ಬಡ್ಡಿಗೆ ಹಣ ಪಡೆಯುತ್ತಿದ್ದೀವಿ ಎಂಬುದನ್ನೇ ಮರೆತುಹೋಗಿರುವುದು ದುರಂತ.

ಈ ಸಾಲ ಪಡೆಯುವ ಟ್ರೆಂಡ್ ಹೆಚ್ಚಾದ ಕಾರಣ ಸಿಬಿಲ್​ ಸ್ಕೋರ್ ಮತ್ತು ಕ್ರೆಡಿಟ್ ಸ್ಕೋರ್ ಎಂಬ ಪದಗಳು ಜನರಿಗೆ ಚಿರಪರಿಚಿತವಾಗಿವೆ. ಮುಂಚೆ ಎಲ್ಲ ನಿಮ್ಮ ಬಳಿ ಎಷ್ಟು ಆಸ್ತಿ ಇದೆ ಎಂದು ಕೇಳುತ್ತಿದ್ದರು. ಆದರೀಗ, ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂದು ಕೇಳುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಅಸಲಿಗೆ, ಇಲ್ಲಿ ಕುತೂಹಲಕಾರಿ ವಿಚಾರ ಎಂದರೆ ಈ ಸಿಬಿಲ್​ ಸ್ಕೋರ್ ವ್ಯಕ್ತಿಯ ಹೆಸರಿನಲ್ಲಿ ಯಾವಾಗ ಆರಂಭವಾಗುತ್ತದೆ? ಸಾಲವನ್ನು ತೆಗೆದುಕೊಂಡರೆ ಮಾತ್ರ ಈ ಅಂಕಿ ರಚನೆಯಾಗುತ್ತಾ ಅಥವಾ ಯಾವ ಕ್ಷಣದಿಂದ ಅಂಕಿಗಳು ಏರಿಳಿತಗೊಳ್ಳಲು ಶುರುವಾಗುತ್ತೆ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.

ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಸಿಬಿಲ್​ ಸ್ಕೋರ್ ಇರುತ್ತೆ ಎಂಬುದು ನಿಮ್ಮ ತಪ್ಪು ಕಲ್ಪನೆ. ಕೇವಲ ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್​), ಸಂಬಳ ಖಾತೆ (ಸ್ಯಾಲರಿ ಅಕೌಂಟ್​) ಅಥವಾ ಬ್ಯಾಂಕ್‌ನಲ್ಲಿ ಠೇವಣಿ (ಡೆಪಾಸಿಟ್​) ಇದ್ದರೆ ಮಾತ್ರ ಸಿಬಿಲ್​ ಅಂಕಿ ರಚನೆಯಾಗುವುದಿಲ್ಲ. ಒಬ್ಬ ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಅವರು ಕ್ರೆಡಿಟ್ ವ್ಯವಸ್ಥೆಯನ್ನು ಪ್ರವೇಶಿಸಿದ ನಂತರ ಮಾತ್ರವೇ ಶುರುವಾಗುವುದು.

ಅಷ್ಟಕ್ಕೂ ಸಿಬಿಲ್​ ಸ್ಕೋರ್ ಆರಂಭ ಹೇಗೆ?

ಒಬ್ಬ ವ್ಯಕ್ತಿಯ ಕ್ರೆಡಿಟ್ ಇತಿಹಾಸವು ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ನಂತಹ ಕ್ರೆಡಿಟ್ ಸೌಲಭ್ಯವನ್ನು ಮೊದಲು ತೆಗೆದುಕೊಂಡಾಗಿನಿಂದ ಶುರುವಾಗುತ್ತದೆ. ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳಂತಹ ಸಾಲದಾತರು ತಮ್ಮ ಗ್ರಾಹಕರ ಕ್ರೆಡಿಟ್ ಖಾತೆಗಳು ಮತ್ತು ಪಾವತಿ ವಿವರಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಆ ರಿಪೋರ್ಟ್​ ಅನ್ನು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಒದಗಿಸುತ್ತಾರೆ. ಆ ಮಾಹಿತಿಯಿಂದ ಕ್ರೆಡಿಟ್ ವರದಿ ಮತ್ತು ಸಿಬಿಲ್​ ಸ್ಕೋರ್ ಎರಡೂ ಅಪ್ಡೇಟ್​ ಅಥವಾ ಏರಿಳಿತವಾಗುತ್ತದೆ.

ಯಾವ ಹಂತದಿಂದ ಪ್ರಾರಂಭ?

ಇಲ್ಲಿ ಮುಖ್ಯವಾದ ವಿಷಯವೆಂದರೆ, ಸಿಬಿಲ್​ ಸ್ಕೋರ್ 300ರಿಂದ 900 ಪಾಯಿಂಟ್​ವರೆಗೆ ಇರುತ್ತದೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯು 300 ಸ್ಕೋರ್‌ನೊಂದಿಗೆ ಪ್ರಾರಂಭಿಸುವುದಿಲ್ಲ. ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದಿದ್ದರೆ, ಸಿಬಿಲ್​ ವರದಿಯು ಸಾಮಾನ್ಯವಾಗಿ NA ಅಥವಾ NH ಎಂದೇ ತೋರಿಸುತ್ತದೆ. ಇದರರ್ಥ ವ್ಯಕ್ತಿಯ ಅಂಕಿಯನ್ನು ಲೆಕ್ಕಾಚಾರ ಮಾಡಲು ಸಾಕಷ್ಟು ಕ್ರೆಡಿಟ್ ಇತಿಹಾಸವಿಲ್ಲ ಎಂದು. ಮಾಹಿತಿ ಪ್ರಕಾರ, ಕ್ರೆಡಿಟ್ ಇತಿಹಾಸದ ಆರು ತಿಂಗಳಿಗಿಂತ ಕಡಿಮೆ ಇರುವಾಗ ವಿಶೇಷ ಸೂಚಕವು ಕಾಣಿಸಿಕೊಳ್ಳಬಹುದು. ಕ್ರೆಡಿಟ್ ಹಿಸ್ಟರಿ ಆರು ತಿಂಗಳಿಗಿಂತ ಹೆಚ್ಚು ಮತ್ತು ಕ್ರೆಡಿಟ್ ಮಾಹಿತಿ ಇತ್ತೀಚೆಗೆ ರಿಪೋರ್ಟ್ ಆದಾಗ, ಅದು 300ರಿಂದ 900 ಅಂಕಿಯೊಳಗೆ ಏರಿಳಿತಗೊಳ್ಳಬಹುದು.

Also Read
ಬೆರಳಷ್ಟಿಲ್ಲದ ಈ ಸೀಗಡಿ ಮಾಡೋ ಸೌಂಡ್​ ಮುಂದೆ ಬುಲೆಟ್​ ಶಬ್ದವೇ ಠುಸ್​! ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pistol Shrimp
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಸಿಬಿಲ್​ ಸ್ಕೋರ್​ ಶುರು ಯಾವಾಗ? ಲೋನ್​ ಪಡೆಯದಿದ್ರೂ ಅಂಕಿಗಳು ಬದಲಾಗುತ್ತಾ? ಇಲ್ಲಿದೆ ಉತ್ತರ | CIBIL Score

ಸಿಬಿಲ್​ ಸ್ಕೋರ್ ನಿರ್ಧರಿಸೋದು ಯಾರು?

ಇದು ಬ್ಯಾಂಕ್ ಮ್ಯಾನೇಜರ್ ಅಥವಾ ಯಾವುದೇ ವೈಯಕ್ತಿಕ ಅಧಿಕಾರಿ ನಿರ್ಧರಿಸುವ ಸ್ಕೋರ್ ಅಲ್ಲ. ಬದಲಿಗೆ, TransUnion CIBIL ಅದರ ಕ್ರೆಡಿಟ್ ಡೇಟಾ ಮತ್ತು ಸ್ಕೋರಿಂಗ್ ಮಾದರಿಯ ಆಧಾರದ ಮೇಲೆ ಸ್ಕೋರ್ ಅನ್ನು ರಚಿಸುತ್ತದೆ. ಮರುಪಾವತಿ ಇತಿಹಾಸ, ಕ್ರೆಡಿಟ್ ಬಳಕೆ, ಕ್ರೆಡಿಟ್ ಖಾತೆಗಳನ್ನು ಹೊಂದಿರುವ ಅವಧಿ, ಎಷ್ಟು ಬಾರಿ ಸಾಲಕ್ಕಾಗಿ ವಿಚಾರಿಸಿದ್ದಾರೆ ಎಂಬ ಅಂಶಗಳು ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ಸಿಬಿಲ್​ ಸ್ಕೋರ್ ಮೇಲೆಯೇ ಸಂಪೂರ್ಣವಾಗಿ ಸಾಲವನ್ನು ಕೊಡಲು ಸಾಧ್ಯವಿಲ್ಲ. ಲೋನ್​ ಕೊಡಬೇಕೋ ಅಥವಾ ಬೇಡವೋ ಎಂಬುದರ ಕುರಿತು ಅಂತಿಮ ನಿರ್ಧಾರವು ಆಯಾ ಬ್ಯಾಂಕ್ ಅಥವಾ ಸಾಲದಾತರಿಗೆ ಇರುತ್ತದೆ. ಆರ್​ಬಿಐ ಪ್ರಕಾರ, ಕ್ರೆಡಿಟ್ ಮಾಹಿತಿ ಕಂಪನಿಗಳು ಈ ಸ್ಕೋರಿಂಗ್ ಮಾದರಿಗಳನ್ನು ಬಳಸುತ್ತವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net