ಸಚಿವನ ಬೆಡ್‌ರೂಮ್‌ನಲ್ಲಿ ಕಂಡ ಆ ದೃಶ್ಯವೇನು! ಪತ್ನಿ ಬಿಂದು ಮೆನನ್ ಮಾಡಿರುವ ಆಘಾತಕಾರಿ ಆರೋಪದ ಹಿಂದಿನ ಮರ್ಮವೇನು? Ganesh Kumar
ಸಚಿವನ ಬೆಡ್‌ರೂಮ್‌ನಲ್ಲಿ ಕಂಡ ಆ ದೃಶ್ಯವೇನು! ಪತ್ನಿ ಬಿಂದು ಮೆನನ್ ಮಾಡಿರುವ ಆಘಾತಕಾರಿ ಆರೋಪದ ಹಿಂದಿನ ಮರ್ಮವೇನು?
Published on:
Copied
Follow Us
ತಿರುವನಂತಪುರಂ: ಕೇರಳದ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರಕ್ಕೆ ಭಾರಿ ಮುಜುಗರ ಉಂಟಾಗಿದೆ. ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್(Ganesh Kumar) ಅವರ ಪತ್ನಿ ಬಿಂದು ಮೆನನ್ ಅವರು ತನ್ನ ಪತಿಯ ವಿರುದ್ಧ ವ್ಯಭಿಚಾರ ಮತ್ತು ದೈಹಿಕ ದೌರ್ಜನ್ಯದ ಗಂಭೀರ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ನನ್ನ ಕಣ್ಣೆದುರೇ ಆಕೆ ಇದ್ದಳು: ಬಿಂದು ಮೆನನ್ ಆಕ್ರೋಶ
ಈ ಬಗ್ಗೆ ಸೋಮವಾರ ಮಾಧ್ಯಮಗಳ ಮುಂದೆ ಬಂದ ಬಿಂದು ಮೆನನ್, ಕಳೆದ ಶನಿವಾರ ವಾಲಕಮ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗಣೇಶ್ ಕುಮಾರ್ ಅವರು ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅವರು ನನ್ನ ನಂಬರ್ ಬ್ಲಾಕ್ ಮಾಡಿದ್ದರು. ಈ ವಿಷಯಕ್ಕೆ ಒಂದು ಅಂತ್ಯ ಹಾಡಬೇಕೆಂದು ನಾನು ಮನೆಗೆ ಹೋದಾಗ ಕಂಡ ದೃಶ್ಯವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಬಿಂದು ಹೇಳಿದ್ದಾರೆ.
ಬೆಡ್‌ರೂಮ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಫೋಟೋಗಳನ್ನು ತೆಗೆಯಲು ಹೋದಾಗ ಸಚಿವರ ಆಪ್ತ ಸಹಾಯಕರು ಮತ್ತು ಡ್ರೈವರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಚಿವರ ಪತ್ನಿ ದೂರಿದ್ದಾರೆ.
ನನಗೆ 5,000 ಪ್ರೇಮ ಸಂಬಂಧಗಳಿವೆ: ಸಚಿವ ಗಣೇಶ್ ಕುಮಾರ್ ವ್ಯಂಗ್ಯ!
ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸಚಿವ ಗಣೇಶ್ ಕುಮಾರ್, ಇವೆಲ್ಲವೂ ವಿರೋಧ ಪಕ್ಷದ ಚುನಾವಣಾ ಸ್ಟಂಟ್ ಎಂದು ಕರೆದಿದ್ದಾರೆ. ಅತಿ ವಿಚಿತ್ರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ಕೇವಲ ಒಂದಲ್ಲ, 5,000 ಪ್ರೇಮ ಸಂಬಂಧಗಳಿವೆ. ಪ್ರೇಮ ಸಂಬಂಧ ಇಲ್ಲದವರು ಮೂರ್ಖರು ಎಂದು ಲೇವಡಿ ಮಾಡಿದ್ದಾರೆ.
ಮುಂದುವರೆದು ಮಾತನಾಡಿರುವ ಗಣೇಶ್, ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಕಮಲಾ ಸುರಯ್ಯ ಅವರಂತಹ ಮಹಾನ್ ವ್ಯಕ್ತಿಗಳನ್ನೂ ಪ್ರೇಮದ ವಿಷಯದಲ್ಲಿ ಗುರಿಯಾಗಿಸಲಾಗಿತ್ತು. ನನ್ನ ವೈಯಕ್ತಿಕ ಜೀವನದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ನಾನು ಭ್ರಷ್ಟಾಚಾರ ರಹಿತ ಮತ್ತು ಕೋಮುವಾದ ರಹಿತ ಜನಪ್ರತಿನಿಧಿಯಾಗಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸರಿಗೆ ಕರೆ ಮಾಡಿದರೂ, ಸಚಿವರ ಬೆಂಬಲಿಗರು ಪೊಲೀಸರನ್ನು ಒಳಗೆ ಬಿಡದೆ ಆ ಮಹಿಳೆಯನ್ನು ಅಲ್ಲಿಂದ ರಹಸ್ಯವಾಗಿ ಸಾಗಿಸಿದ್ದಾರೆ ಎಂದು ಬಿಂದು ಮೆನನ್ ಗಂಭೀರ ಆರೋಪ ಮಾಡಿದ್ದಾರೆ.
ಹಳೆಯ ಇತಿಹಾಸ ಮರುಕಳಿಸುತ್ತಿದೆಯೇ..?
ಗಣೇಶ್ ಕುಮಾರ್ ಅವರಿಗೆ ವಿವಾದಗಳು ಹೊಸದೇನಲ್ಲ.
2013ರ ಘಟನೆ: ಮೊದಲ ಪತ್ನಿ ಯಾಮಿನಿ ತಂಗಚಿ ಅವರು ಗೃಹ ಹಿಂಸೆಯ ಆರೋಪ ಮಾಡಿದಾಗ ಅವರು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ರಾಜೀನಾಮೆ ನೀಡಬೇಕಾಗಿತ್ತು.
ಸೋಲಾರ್ ಹಗರಣ: ಮಾಜಿ ಸಿಎಂ ಉಮ್ಮನ್ ಚಾಂಡಿ ಅವರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸುವಲ್ಲಿ ಗಣೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಬಿಐ ವರದಿ ನೀಡಿತ್ತು.
ಪೊಲೀಸರ ನಡೆಯ ಬಗ್ಗೆ ಆಕ್ರೋಶ
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಈ ಘಟನೆಯನ್ನು ಖಂಡಿಸಿದ್ದು, ಒಬ್ಬ ಸಚಿವನ ಪತ್ನಿಗೇ ಕೇರಳದಲ್ಲಿ ನ್ಯಾಯ ಸಿಗುತ್ತಿಲ್ಲ ಎಂದರೆ ಸಾಮಾನ್ಯ ಮಹಿಳೆಯರ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಸಚಿವರ ಮನೆಗೆ ಹೋಗಿ ಹೇಳಿಕೆ ಪಡೆಯದೆ ವಾಪಸ್ ಬಂದಿದ್ದೇಕೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಅಖಾಡದಲ್ಲಿ ಬಿರುಗಾಳಿ
ಕೇರಳ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಚಿವರ ಈ ಲವ್ ಅಫೇರ್ ಮತ್ತು ಪತ್ನಿಯ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣವು ಎಡರಂಗದ ವರ್ಚಸ್ಸಿಗೆ ಧಕ್ಕೆ ತಂದಿದೆ. ಕುಟುಂಬ ಕಲಹ ಈಗ ಬೀದಿಗೆ ಬಂದಿದ್ದು, ಇದು ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ,(ಏಜೆನ್ಸೀಸ್).