ಜನವರಿ 1, 2027ರಿಂದ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಸಿಮ್ ಬೈಂಡಿಂಗ್ ರೂಲ್ಸ್ ಜಾರಿ
ಖಾತೆಗೆ ನೋಂದಾಯಿಸಲಾದ ಸಂಖ್ಯೆಯ ಸಕ್ರಿಯ ಸಿಮ್ ಅದೇ ಫೋನ್‌ನಲ್ಲಿದ್ದರೆ ಮಾತ್ರ ವರ್ಕಿಂಗ್?
ವಾಟ್ಸ್ಆ್ಯಪ್, ಟೆಲಿಗ್ರಾಮ್ ಮತ್ತು ಇತರ ಹಲವು ಅಪ್ಲಿಕೇಶನ್‌ಗಳಿಗೆ ನಿಯಮ ಅನ್ವಯ
Sim Binding: ಕಳೆದ ಕೆಲವು ದಿನಗಳಿಂದ 2027ರ ಜನವರಿ 1ರಿಂದ ನಿಮ್ಮ ಸಿಮ್ ಕಾರ್ಡ್ ಫೋನ್ನಲ್ಲಿ ಇಲ್ಲದಿದ್ದರೆ ವಾಟ್ಸ್ಆ್ಯಪ್, ಟೆಲಿಗ್ರಾಂನಂತಹ ಕೆಲವು ಮೆಸೇಜಿಂಗ್ ಆ್ಯಪ್ಗಳು ವರ್ಕ್ ಆಗದಿರಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂಬ ವರದಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜನರ ತಲೆಗೆ ಹುಳಬಿಟ್ಟಿವೆ. ಇದು ಯಾವ ರೀತಿ ಕೆಲಸ ಮಾಡುತ್ತದೆ? ಹ್ಯಾಕರ್ಸ್ಗಳ ಹಾವಳಿಗೆ ಬ್ರೇಕ್ ಹಾಕಲು ಮಾಡಲಾಗಿದೆಯಾ ಅಥವಾ ನಿರ್ದಿಷ್ಟ ಫೋನ್‌ಗಳಲ್ಲಿ ಮಾತ್ರ ಇದು ಸ್ಥಗಿತಗೊಳ್ಳಲಿದೆಯಾ ಎಂಬ ಹತ್ತು ಹಲವು ಗೊಂದಲಮಯ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ.
2027ರ ಜನವರಿ 1ರಿಂದ 'ಸಿಮ್ ಬೈಂಡಿಂಗ್' ಎಂಬ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ಮೊಬೈಲ್‌ನಲ್ಲಿರುವ ಸಿಮ್ ಆಯಾ ಮೆಸೇಜಿಂಗ್ ಆ್ಯಪ್ಗಳಿಗೆ ಲಿಂಕ್ ಮಾಡಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ. ವಾಟ್ಸ್ಆ್ಯಪ್ ಬಳಸುವ ಸಿಮ್ ಫೋನ್‌ನಲ್ಲೇ ಇರಬೇಕು. ಫೋನ್‌ನಿಂದ ಸಿಮ್ ತೆಗೆದರೆ, ಅದು ಕಾರ್ಯನಿರ್ವಹಿಸುವುದಿಲ್ಲ. ಸೈಬರ್ ವಂಚನೆ ಮತ್ತು ನಕಲಿ ಖಾತೆಗಳನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವಿವರಿಸಲಾಗಿದೆ.
ದೂರಸಂಪರ್ಕ ಇಲಾಖೆ (DoT) ಮಾರ್ಗಸೂಚಿಗಳ ಪ್ರಕಾರ, ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ನ ಖಾತೆಯನ್ನು ಸಕ್ರಿಯಗೊಳಿಸಿದ ಸಿಮ್ ಕಾರ್ಡ್ ಅದೇ ಫೋನ್‌ನಲ್ಲಿರಬೇಕು. ಪ್ರಸ್ತುತ, ಒಟಿಪಿ ಮೂಲಕ ಖಾತೆಯನ್ನು ಪರಿಶೀಲಿಸಿದ ನಂತರ, ಸಿಮ್ ಕಾರ್ಡ್ ಅನ್ನು ಮತ್ತೊಂದು ಫೋನ್‌ಗೆ ಬದಲಾಯಿಸಿದರೂ ಅಥವಾ ತೆಗೆದುಹಾಕಿದರೂ ಸಹ, ವೈ-ಫೈ ಮೂಲಕ ಕೆಲವು ಸಾಧನಗಳಲ್ಲಿ ಮೆಸೇಜಿಂಗ್ ಆ್ಯಪ್ಗಳನ್ನು ಬಳಸಬಹುದಾಗಿದೆ.
ಸಿಮ್ ಬೈಂಡಿಂಗ್ ಅಂದರೆ ಮೆಸೇಜಿಂಗ್ ಆಪ್ ಅಕೌಂಟ್ ಇರುವ ನಂಬರ್ ಅದೇ ಮೊಬೈಲ್ನಲ್ಲಿ ಇದ್ದರೆ ಮಾತ್ರ ವಾಟ್ಸ್ ಆ್ಯಪ್ ನಂತಹ ಆ್ಯಪ್ಗಳು ಕೆಲಸ ಮಾಡುತ್ತವೆ. ಟೆಲಿಗ್ರಾಂ ಜತೆಗೆ, ಸ್ನ್ಯಾಪ್ಚಾಟ್, ಆರಟ್ಟಯ್, ಶೇರ್ಚಾಟ್, ಜೋಶ್, ಜಿಯೋ ಚಾಟ್ ಮತ್ತು ಸಿಗ್ನಲ್ನಂತಹ ಅಪ್ಲಿಕೇಶನ್ಗಳು ಸಹ ಈ ನಿಯಮಗಳ ಅಡಿಯಲ್ಲಿ ಬರುತ್ತವೆ ಎನ್ನಲಾಗಿದೆ.
ನೋಂದಾಯಿತ ಸಿಮ್ ಇಲ್ಲದೆಯೇ ಕೇವಲ ವೈ-ಫೈ ಮಾತ್ರ ಟ್ಯಾಬ್ಲೆಟ್‌ಗಳು ಅಥವಾ ಸಾಧನಗಳಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಬಳಸುವವರ ಮೇಲೆ ಈ ನಿಯಮಗಳು ಹೆಚ್ಚು ಪರಿಣಾಮ ಬೀರಬಹುದು. ಪ್ರಯಾಣ ಮಾಡುವಾಗ ಸಿಮ್ ಬದಲಾಯಿಸುವ ಅಥವಾ ವಿದೇಶದಲ್ಲಿ ಸ್ಥಳೀಯ ಸಿಮ್ ಬಳಸುವವರ ಖಾತೆಗಳ ಮೇಲೂ ಇದು ಪರಿಣಾಮ ಬೀರಬಹುದು. ಈ ಮಧ್ಯೆ, eSIMಗಳ ಸಂದರ್ಭದಲ್ಲಿ ಈ ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಸ್ಪಷ್ಟವಾದ ವಿವರಗಳಿಲ್ಲ.
ಪ್ರಸ್ತುತ, ಸೈಬರ್ ಅಪರಾಧಗಳ ಬೆದರಿಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರೊಂದಿಗೆ, ಸಿಮ್ ಬೈಂಡಿಂಗ್ ಇಲ್ಲದಿದ್ದರೂ, ಸಿಮ್ ಅನ್ನು ತೆಗೆದುಹಾಕಿದರೂ ಅಥವಾ ನಿಷ್ಕ್ರಿಯಗೊಳಿಸಿದರೂ, ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಅಂದರೆ ಒಮ್ಮೆ ಲಾಗಿನ್ ಆದರೆ, ಖುದ್ದಾಗಿ ನೀವು ಲಾಗೌಟ್ ಮಾಡದೆ ಹೋದರೂ ಅದು ಲಾಗಿನ್ ಆಗಿಯೇ ಇರುತ್ತದೆ. ಇದು ವ್ಯಕ್ತಿಗಳ ಹೆಸರಿನಲ್ಲಿ ವಂಚನೆ, ಹೂಡಿಕೆ ಮತ್ತು ಸಾಲದ ಹೆಸರಿನಲ್ಲಿ ದ್ರೋಹ ಮತ್ತು ಡಿಜಿಟಲ್ ಅರೆಸ್ಟ್ನಂತಹ ವಂಚನೆಗಳು ಅಪರಾಧಗಳಿಗೆ ಕಾರಣವಾಗುತ್ತದೆ.
ಸರ್ಕಾರದ ಅಂದಾಜಿನ ಪ್ರಕಾರ, 2024ರಲ್ಲಿ ಸೈಬರ್ ವಂಚನೆಯ ನಷ್ಟವು 22,800 ಕೋಟಿ ರೂ. ತಲುಪಿದೆ. ಪ್ರಸ್ತುತ, ಬ್ಯಾಂಕಿಂಗ್ ಮತ್ತು ಪಾವತಿ ಅಪ್ಲಿಕೇಶನ್‌ಗಳು ಸಿಮ್ ಬೈಂಡಿಂಗ್ ಅನ್ನು ಕಾರ್ಯರೂಪಕ್ಕೆ ತರುತ್ತಿವೆ. ಶೀಘ್ರದಲ್ಲೇ, ಇದನ್ನು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಿಗೂ ಅನ್ವಯ ಮಾಡುವುದರಿಂದ ಸೈಬರ್ ಕ್ರೈಂ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಕೇಂದ್ರ ಸರ್ಕಾರ ಲೆಕ್ಕಾಚಾರ.
ಇಂದು ಅನೇಕರು ತಮ್ಮ ಫೋನ್‌ನಿಂದ ಕಂಪ್ಯೂಟರ್ನ ವಾಟ್ಸ್ಆ್ಯಪ್ಗೆ ಲಾಗಿನ್ ಆಗಿ, ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಈ ವೇಳೆ, ಕೆಲಸದ ನಂತರ ಲಾಗೌಟ್ ಮಾಡುವುದನ್ನೇ ಮರೆತುಹೋಗುತ್ತಾರೆ. ಇದರಿಂದ, ಆನ್ಲೈನ್ ವಂಚಕರಿಗೆ ಸ್ಕ್ಯಾಮ್ ಮಾಡಲು ಇನ್ನಷ್ಟು ಸುಲಭವಾಗಬಹುದು. ಈ ನಿಟ್ಟಿನಲ್ಲಿ, ಸಿಮ್ ಬೈಂಡಿಂಗ್ ಜಾರಿಯಾದರೆ, ಒಮ್ಮೆ ನೀವು ನಿಮ್ಮ ಕಂಪ್ಯೂಟರ್/ ಲ್ಯಾಪ್ಟಾಪ್ನಲ್ಲಿ ವಾಟ್ಸ್ಆ್ಯಪ್ ಅಥವಾ ನಿಯಮಗಳು ಅನ್ವಯಿಸಿದ ಮೆಸೇಜಿಂಗ್ ಆ್ಯಪ್ಗಳನ್ನು ಲಾಗಿನ್ ಮಾಡಿದರೆ, ಅವು ಕೆಲವು ಸಮಯದ ಬಳಿಕ ಅಥವಾ ಅರ್ಧಗಂಟೆ ನಂತರ ಆಟೋಮೆಟಿಕ್ ಆಗಿ ಲಾಗೌಟ್ ಆಗಲಿದೆ. ಇದು ನಿಜಕ್ಕೂ ಗಮನಾರ್ಹ.
2027ರ ಜನವರಿ 1ರಿಂದ ಕೆಲವು ಐಫೋನ್ ಅಥವಾ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟನೆಗಳಿಲ್ಲ. ಹೊಸ ನಿಯಮದ ಮುಖ್ಯ ಉದ್ದೇಶ, ಫೋನ್‌ನ ಮಾಡೆಲ್ ಅಥವಾ ಅದರ ಆಪರೇಟಿಂಗ್ ಸಿಸ್ಟಮ್ ಅಲ್ಲವೇ ಅಲ್ಲ. ಬದಲಿಗೆ, ಮೆಸೇಜಿಂಗ್ ಆ್ಯಪ್ಗಳನ್ನು ಮೊಬೈಲ್ ಸಿಮ್‌ಗೆ ಲಿಂಕ್ ಮಾಡುವುದಾಗಿದೆ. ಇದರಿಂದ ಕೆಲವು ಫೋನ್‌ಗಳಲ್ಲಿ ವರ್ಕ್ ಆಗುವುದಿಲ್ಲ ಎಂಬ ಸುದ್ದಿಗಳು ವದಂತಿಗಳು ಅಷ್ಟೇ,(ಏಜೆನ್ಸೀಸ್).