

ಸಿಎಂ ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶ ಇಲ್ಲ ಎಂದು ಬಣ್ಣಿಸಿದ ಯುಬಿಟಿ ಸಂಸದ ಸಂಜಯ್ ರಾವತ್.
2027ರ ಚುನಾವಣೆಯ ನಂತರವೂ ಯೋಗಿ ಆದಿತ್ಯನಾಥ್ಅ ವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದ ರಾವತ್.
ಚುನಾವಣೆಯ ನಂತರ ಶಾಸಕರು ಸಿಎಂ ಆಯ್ಕೆ ಮಾಡುತ್ತಾರೆ ಎಂಬ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿಕೆಯಿಂದ ಬಿಜೆಪಿಯಲ್ಲಿ ಹೊಸ ಚರ್ಚೆ.
ಲಖನೌ: 'ಯೋಗಿ ಅವರು ತಮ್ಮನ್ನು ತಾವು ಸಿಎಂ ಮುಖವೆಂದು ಘೋಷಿಸಿಕೊಂಡಿದ್ದರೆ ಅದು ಶ್ಲಾಘನೀಯ. ನಾವೂ ಸಹ ಯೋಗಿ ಜೀ ಅವರನ್ನು ಪ್ರೀತಿಸುತ್ತೇವೆ. ಯೋಗಿ ಜೀ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುವ ಹಿಂದುತ್ವದ ಮುಖವಾಗಿದ್ದಾರೆ. ಯೋಗಿ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ' ಹೀಗೆಂದು ಯುಪಿ ಸಿಎಂ ಯೋಗಿ ಆದಿತ್ಯ ನಾಥ್ ಪರ ಬ್ಯಾಟ್ ಬೀಸಿದ್ದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್. ಅವರ ಈ ಹೇಳಿಕೆಗಳು ಸಾಕಷ್ಟು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಗುರುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದು, ಅವರನ್ನು ಹಿಂದುತ್ವದ ಅತ್ಯುನ್ನತ ಮುಖ ಎಂದು ಕೊಂಡಾಡಿದ್ದಾರೆ. 2027ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರವೂ ಯೋಗಿ ಆದಿತ್ಯನಾಥ್ ಅವರೇ ಉತ್ತರ ಪ್ರದೇಶವನ್ನು ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಯೋಗಿ ಅವರು ತಮ್ಮನ್ನು ತಾವು ಸಿಎಂ ಮುಖವೆಂದು ಘೋಷಿಸಿಕೊಂಡಿದ್ದರೆ ಅದು ಶ್ಲಾಘನೀಯ. ಯೋಗಿ ಆದಿತ್ಯನಾಥ್ ಅವರು ಸಮರ್ಥ ನಾಯಕರಾಗಿದ್ದು, ಹಿಂದುತ್ವದ ಪ್ರಮುಖ ಮುಖವಾಗಿದ್ದಾರೆ. ಯೋಗಿ ಇಲ್ಲದಿದ್ದರೆ ಉತ್ತರ ಪ್ರದೇಶವಿಲ್ಲ, ಯುಪಿಯಲ್ಲಿ ಯೋಗಿ ಅವರೇ ಇರುತ್ತಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ ಬಹುಮತ ಪಡೆಯಲಿದೆ ಮತ್ತು ಆಯ್ಕೆಯಾದ ಬಹುಪಾಲು ಶಾಸಕರು ತಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ಅವರಿಗಿದೆ ಎಂದರ್ಥ ಎಂದರು ಸಂಜಯ್ ರಾವತ್.
ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು, ಸಿಎಂ ಆಗಿ ಯೋಗಿ ಆದಿತ್ಯ ನಾಥ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಬದಲಿಗೆ, ಚುನಾವಣೆಯ ನಂತರ ಹೊಸದಾಗಿ ಆಯ್ಕೆಯಾದ ಶಾಸಕರಿಂದ ಸಿಎಂ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಮುಂದಿನ ಚುನಾವಣೆಗೆ ಪಕ್ಷವು ಇನ್ನೂ ಅಧಿಕೃತವಾಗಿ ಯಾವುದೇ ಮುಖವನ್ನು ಅಂತಿಮಗೊಳಿಸಿಲ್ಲ ಎಂಬ ಸುಳಿವು ನೀಡಿದ್ದರು.
'ಚುನಾವಣೆಯ ಸಮಯದಲ್ಲಿ ಬಿಜೆಪಿಯ ಮುಖ ಕಮಲದ ಹೂವು, ಮತ್ತು ಕಮಲದ ಹೂವಿನ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಲಾಗುತ್ತದೆ. ಚುನಾವಣೆಯ ನಂತರ ಶಾಸಕರು ಆಯ್ಕೆಯಾದಾಗ, ಅವರ ಸಭೆ ನಡೆಯುತ್ತದೆ ಮತ್ತು ಕೇಂದ್ರ ವೀಕ್ಷಕರು ಬರುತ್ತಾರೆ,'ಎಂದು ಮೌರ್ಯ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ನೀವು ಸಿಎಂ ಅಭ್ಯರ್ಥಿನಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೇಶವ್ ಪ್ರಸಾದ್ ಮೌರ್ಯ, 'ಯಾವುದೇ ವ್ಯಕ್ತಿ ಇದನ್ನು ನಿರ್ಧರಿಸುವುದಿಲ್ಲ. ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಖಾಸಗಿ ಲಿಮಿಟೆಡ್ ಕಂಪನಿಗಳಾಗಿವೆ. ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವಾಗಲೆಲ್ಲಾ ಚುನಾವಣೆಯ ನಂತರ ಕೇಂದ್ರ ವೀಕ್ಷಕರು ಬರುತ್ತಾರೆ. ಏನೇ ಆದರೂ 2027ರಲ್ಲಿ ಅಂತಿಮ ಮಾಹಿತಿ ನಿಮಗೆ ಸಿಗಲಿದೆ ಎಂದು ಹೇಳಿದರು.
ಸಂವಿಧಾನ ದಿನದಂದು ಲಖನೌನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 'ಸಂವಿಧಾನ ರಕ್ಷಾ ಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಚುನಾವಣಾ ಪ್ರಚಾರದುದ್ದಕ್ಕೂ ಮೋದಿ ಪದೇ ಪದೇ ಘೋಷಣೆ ಕೂಗಿದರೂ ಬಿಜೆಪಿ ತನ್ನ ಗುರಿಗಿಂತ ಬಹಳ ಹಿಂದೆ ಉಳಿದಿದೆ' ಎಂದರು.
'ನಾನು ಉತ್ತರ ಪ್ರದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಹೋದಲ್ಲೆಲ್ಲಾ ತಮ್ಮ ಎಲ್ಲಾ ಭಾಷಣಗಳಲ್ಲಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳು ಎಂದು ಹೇಳುತ್ತಿದ್ದರು. ಆದರೆ ಬಿಜೆಪಿ 400 ಸ್ಥಾನಗಳನ್ನು ದಾಟಿತೇ? ಜನರು ನಿಮ್ಮನ್ನು ಮನೆಗೆ ಕಳುಹಿಸಿದರು. ಉತ್ತರ ಪ್ರದೇಶದ ಜನರು ನಿಮ್ಮನ್ನು ಮಂಡಿಯೂರುವಂತೆ ಮಾಡಿದರು' ಎಂದು ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದರು (ಏಜೆನ್ಸೀಸ್).