

ಚೆನ್ನೈ: ಕಾಂಗ್ರೆಸ್‌ನ ದ್ರೋಹದಿಂದಾಗಿ ಡಿಎಂಕೆ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದೆ ಎಂದು ಸೋಮವಾರ(ಅ. 12) ಮತ್ತೊಮ್ಮೆ ಘೋಷಿಸಿರುವ ಡಿಎಂಕೆ, ಆ ಪಕ್ಷದ ನೇತೃತ್ವದ ಪ್ರತಿಭಟನೆಗಳಲ್ಲಿ ಭಾಗವಹಿಸುವ ಯಾವುದೇ ಬದ್ಧತೆ ತನಗಿಲ್ಲವೆಂದು ಸ್ಪಷ್ಟಪಡಿಸಿದೆ. ಮತ್ತು ತಮ್ಮದು ಏನಿದ್ದರೂ ಸ್ವತಂತ್ರ ಹಾದಿ ಎಂದು ಪ್ರತಿಪಾದಿಸಿದೆ.
ಎಸ್ಐಆರ್ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ಹೋರಾಟದಲ್ಲಿ ಡಿಎಂಕೆ ಭಾಗವಹಿಸದ ಹಿನ್ನೆಲೆ ತಮಿಳುನಾಡು ಕಾಂಗ್ರೆಸ್ ನಾಯಕರು ಟೀಕಿಸಿದ್ದಕ್ಕೆ ಹೇಳಿಕೆ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿರುವ ಡಿಎಂಕೆ, ತಮಿಳುನಾಡಿನಲ್ಲಿ ಮೈತ್ರಿಕೂಟದ ಚುನಾವಣಾ ಸೋಲಿಗೆ ಕಾಂಗ್ರೆಸ್ ನಾಯಕರು ಎಂದು ಆರೋಪಿಸಿ ಕಿಡಿಕಾರಿದೆ.
ಮೈತ್ರಿಕೂಟದ ಭಾಗವಾಗಿದ್ದರೂ, ತಮಿಳುನಾಡು ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಬಿ. ಮಾಣಿಕಂ ಠಾಗೋರ್, ಗಿರೀಶ್ ಚೋಡಂಕರ್ ಹಾಗೂ ಪ್ರವೀಣ್ ಚಕ್ರವರ್ತಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕಾರಣ. ಪ್ರತಿದಿನ ಡಿಎಂಕೆ ಬಗ್ಗೆ ಅವರು ಮಾಡಿದ ಟೀಕೆಗಳು ಸಹ ಒಂದು ಕಾರಣವಾಗಿತ್ತು ಎಂದು ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದೆ.
ಮೈತ್ರಿಕೂಟದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ನ ಕೆಲವು ಬಣಗಳನ್ನು ಮತ್ತೊಂದು ಪಕ್ಷದ ಸ್ಲೀಪರ್ ಸೆಲ್ ಎಂದು ಬಣ್ಣಿಸಿದ ಡಿಎಂಕೆ, ಮೈತ್ರಿಕೂಟದ ಯಶಸ್ಸಿಗಾಗಿ ಶ್ರಮಿಸಿದ ಕಾಂಗ್ರೆಸ್ ನಾಯಕರ ಪ್ರಯತ್ನಗಳಿಗೆ ಇವರ ನಡೆಗಳು ಧಕ್ಕೆ ತಂದಿವೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗದ ಮತದಾರರ ಪಟ್ಟಿಯ ಎಸ್ಐಆರ್ ಕುರಿತಾದ ತಮ್ಮ ನಿಲುವಿನ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡದಂತೆ ಟ್ಯಾಗೋರ್ ಅವರಿಗೆ ಎಚ್ಚರಿಕೆ ನೀಡಿದ ಪಕ್ಷವು, ಇಂತಹ ನಿರಂತರ ಟೀಕೆಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
ಸಚಿವ ಸ್ಥಾನಗಳಿಗಾಗಿ ಮೈತ್ರಿ ಧರ್ಮವನ್ನು ಉಲ್ಲಂಘಿಸಿ, ಡಿಎಂಕೆ ವಿರುದ್ಧ ಕಾಂಗ್ರೆಸ್‌ನ ಪರಾವಲಂಬಿಗಳು ಎಸಗಿದ ದ್ರೋಹದ ಪರಿಣಾಮವಾಗಿ ಡಿಎಂಕೆ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಮೈತ್ರಿ ಧರ್ಮದಿಂದ ಹೊರ ಬಂದ ಬಳಿಕವೇ ತಮ್ಮ ಪಕ್ಷದ ಜನಪ್ರಿಯತೇ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಅದಕ್ಕೆ ಇತ್ತೀಚಿಗೆ ನಡೆದ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ತಿಳಿಸಿದೆ (ಏಜೆನ್ಸೀಸ್).