ಮಧ್ಯಪ್ರಾಚ್ಯ ಯುದ್ಧೋನ್ಮಾದ! ಇದು ನಮಗೆ ಗಂಭೀರವಾದ ವಿಷಯ ಎಂದ ಪ್ರಧಾನಿ ಮಾತಿನ ಅರ್ಥವೇನು? ಭಾರತದ ಆರ್ಥಿಕತೆಗೆ ಕಾದಿದೆಯೇ ಸಂಕಷ್ಟ..? PM Modi

ಮಧ್ಯಪ್ರಾಜ್ಯದಲ್ಲಿ ಯುದ್ಧೋನ್ಮಾದ! ಇದು ನಮಗೆ ಗಂಭೀರವಾದ ವಿಷಯ ಎಂದ ಪ್ರಧಾನಿ ಮಾತಿನ ಅರ್ಥವೇನು? ಭಾರತದ ಆರ್ಥಿಕತೆಗೆ ಕಾದಿದೆಯೇ ಸಂಕಷ್ಟ..?
ಮಧ್ಯಪ್ರಾಜ್ಯದಲ್ಲಿ ಯುದ್ಧೋನ್ಮಾದ! ಇದು ನಮಗೆ ಗಂಭೀರವಾದ ವಿಷಯ ಎಂದ ಪ್ರಧಾನಿ ಮಾತಿನ ಅರ್ಥವೇನು? ಭಾರತದ ಆರ್ಥಿಕತೆಗೆ ಕಾದಿದೆಯೇ ಸಂಕಷ್ಟ..?
Published on
ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದ್ದು, ಇದು ಭಾರತದ ಪಾಲಿಗೆ ಗಂಭೀರ ಕಳವಳದ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.
ಈ ಬಗ್ಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ವಿಶ್ವದ ಶಾಂತಿಗಾಗಿ ಸಂಘರ್ಷಗಳು ರಾಜತಾಂತ್ರಿಕತೆಯ ಮೂಲಕ ಬಗೆಹರಿಯಬೇಕು ಎಂದು ಪ್ರತಿಪಾದಿಸಿದ್ದಾರೆ.

1. ಇಸ್ರೇಲ್ ಮತ್ತು ಯುಎಇ ನಾಯಕರೊಂದಿಗೆ ಮೋದಿ ಮಾತುಕತೆ

ಸೋಮವಾರ ಮಧ್ಯರಾತ್ರಿಯ ನಂತರ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ತಕ್ಷಣವೇ ಯುದ್ಧವನ್ನು ನಿಲ್ಲಿಸಿ ಶಾಂತಿ ಸ್ಥಾಪಿಸಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.
ಅಲ್ಲದೆ, ಇರಾನ್ ನಡೆಸಿದ ಪ್ರತೀಕಾರದ ದಾಳಿಗೆ ತುತ್ತಾದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೂ ಮೋದಿ ಮಾತನಾಡಿದ್ದಾರೆ. ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮೋದಿ, ಸಂಕಷ್ಟದ ಸಮಯದಲ್ಲಿ ಭಾರತವು ಯುಎಇ ಜೊತೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. ಯುಎಇನಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಅಲ್ಲಿನ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ್ದಾರೆ.

2. ಸಿಸಿಎಸ್ ತುರ್ತು ಸಭೆ: ಆಪರೇಷನ್ ರಕ್ಷಣೆಗೆ ಸೂಚನೆ..?

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಪ್ರಧಾನಿ ಮೋದಿ ಅವರು ಭದ್ರತಾ ಕ್ಯಾಬಿನೆಟ್ ಸಮಿತಿ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಗೃಹ ಸಚಿವ ಅಮಿತ್ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು.
ಭಾರತೀಯರ ಸುರಕ್ಷತೆ: ಸಂಘರ್ಷ ಪೀಡಿತ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಆರ್ಥಿಕ ಪರಿಣಾಮ: ಯುದ್ಧದಿಂದಾಗಿ ತೈಲ ಬೆಲೆ ಏರಿಕೆ ಮತ್ತು ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

3. ಜಾಗತಿಕ ವೇದಿಕೆಯಲ್ಲಿ ಶಾಂತಿಯ ಮಂತ್ರ

ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಂತಾಗ ಶಾಂತಿಯ ಕರೆ ಬಲಗೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ. ಭಾರತವು ಮೊದಲಿನಿಂದಲೂ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತಾ ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಅಸ್ಥಿರತೆಯು ಕೇವಲ ಆ ಪ್ರದೇಶಕ್ಕೆ ಸೀಮಿತವಾಗದೆ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಭಾರತದ ಮುಂದಿರುವ ಸವಾಲುಗಳೇನು..?

ವಲಸಿಗರ ರಕ್ಷಣೆ: ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಇರಾನ್‌ನಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಯುದ್ಧದ ಕಿಡಿ ಇಡೀ ಗಲ್ಫ್ ರಾಷ್ಟ್ರಗಳಿಗೆ ಹರಡಿದರೆ ಇವರ ಸುರಕ್ಷತೆ ದೊಡ್ಡ ಸವಾಲಾಗಲಿದೆ.
ತೈಲ ಬಿಕ್ಕಟ್ಟು: ಭಾರತವು ತನ್ನ ತೈಲದ ಬಹುಪಾಲು ಪಾಲನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಕಾರಣದಿಂದ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಬಹುದು.
ಸಮುದ್ರ ಮಾರ್ಗದ ಭದ್ರತೆ: ಪರ್ಶಿಯನ್ ಗಲ್ಫ್‌ನಲ್ಲಿ ನಡೆಯುತ್ತಿರುವ ದಾಳಿಗಳಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಇದು ಭಾರತದ ರಫ್ತು ಮತ್ತು ಆಮದಿನ ಮೇಲೆ ಹೊಡೆತ ನೀಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net