

ವ್ಯಾಪಾರಿಗಳ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ ಅನುಷ್ಠಾನ ಮುಂದೂಡಿಕೆ
ಹಬ್ಬದ ಸೀಸನ್ ಆಗಿರುವುದರಿಂದ ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ
ನವೆಂಬರ್ 2ನೇವಾರದ ನಂತರ ಯುಪಿಐ ಪಾವತಿಗಳ ಮೇಲಿನ ಶುಲ್ಕ ಜಾರಿಗೆ ಹೊಸ ದಿನಾಂಕ ನಿಗದಿ
ನವದೆಹಲಿ: ವ್ಯಾಪಾರಿಗಳ ಮನವಿಗೆ ಕೇಂದ್ರ ಸರ್ಕಾರ, ಯುಪಿಐ ಪಾವತಿಗೆ ಶುಲ್ಕ ವಿಧಿಸುವ ನಿಯಮವನ್ನು ದೀಪಾವಳಿಗೆ ಮುಂದೂಡಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅಧಿಕೃತ ಮಾಹಿತಿ ಹೊರಡಿಸಿದೆ.
2,000 ಕ್ಕಿಂತ ಹೆಚ್ಚಿನ ಮೌಲ್ಯದ ಯುಪಿಐ ಪಾವತಿಗಳ ಮೇಲೆ ಅಕ್ಟೋಬರ್ 15 ರಿಂದ ಜಾರಿಗೆ ತರಲು ಉದ್ದೇಶಿಸಿದ್ದ ವ್ಯಾಪಾರಿ ರಿಯಾಯಿತಿ ದರ(Merchant Discount Rate (MDR)) ದೀಪಾವಳಿ ಹಬ್ಬದ ನಂತರ ಅಂದರೆ, ನವೆಂಬರ್ ಎರಡನೇ ವಾರದ ನಂತರ ಜಾರಿ ಮಾಡಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ.
ಹೊಸ ನಿಯಮದ ಪ್ರಕಾರ 2000 ರೂಪಾಯಿ ಮೇಲ್ಪಟ್ಟ ವ್ಯಾಪಾರ ವಹಿವಾಟುಗಳಿಗೆ ಶೇ.0.4 ರಷ್ಟು ಶುಲ್ಕ ವಿಧಿಸಲು ನಿರ್ಧರಿಸಲಾಗಿತ್ತು. ಈ ಶುಲ್ಕವನ್ನು ವ್ಯಾಪಾರಿಗಳು ಭರಿಸಬೇಕಾಗಿದ್ದು, ಗ್ರಾಹಕರಿಗೆ ಯಾವುದೇ ಹೊರೆ ಇರುವುದಿಲ್ಲ ಎಂದು ಕೇಂದ್ರ ಹೇಳಿತ್ತು. ಆದರೂ ಸಹ ಈ ನಿಯಮ ಜಾರಿಯಾಗುವ ಮುನ್ನವೇ ವ್ಯಾಪಾರಿಗಳು ಹೊಸ ಅಭಿಯಾನ ಶುರು ಮಾಡಿದ್ದವು. ಕ್ಯಾಶ್ ಕೊಡುವುದಾದರೆ ನಿಖರ ಬೆಲೆ ಕೊಡಿ, ಆನ್ಲೈನ್ ಪಾವತಿ ಯಾದರೆ ಒಂದೆರಡು ರೂಪಾಯಿ ಹೆಚ್ಚು ಮಾಡಬೇಕು ಎಂದು ತಮ್ಮದೇ ಆದ ನಿಯಮ ಹಾಕೊಳ್ಳುವ ಮೂಲಕ ಕೇಂದ್ರದ ಈ ನಿರ್ಧಾರದ ವಿರುದ್ಧ ಕಿಡಿಕಾರಿದರು.
ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ವಹಿವಾಟು ಹೆಚ್ಚಿರುವುದರಿಂದ ವ್ಯಾಪಾರಿ ಸಂಘಟನೆಗಳು ವಿಸ್ತರಣೆಗೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿ ಇಂದು (ಅ.13) ಸಭೆ ನಡೆಸಿ ದೀಪಾವಳಿ ನಂತರ, ಹೊಸ ನಿಯಮವನ್ನು ಜಾರಿ ಮಾಡಲಾಗುವುದು ಎಂದು ಹೇಳಿದೆ. ಜೊತೆಗೆ, ಶೀಘ್ರದಲ್ಲೇ ನೂತನ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಇದನ್ನು ಗ್ರಾಹಕರ ಮೇಲೆ ಹೊರೆಸುವಂತಿಲ್ಲ ಎಂದು ಕೇಂದ್ರ ಹೇಳಿತ್ತು. ಅದರಂತೆ, ಗ್ರಾಹಕರಿಗೆ ಯುಪಿಐ ಪಾವತಿಗೆ ಶುಲ್ಕಭರಿಸುವ ಹೊರೆಯಿಲ್ಲ.
ಇನ್ನೂ ಕುಟುಂಬ, ಸ್ನೇಹಿತರು, ಸೆಲ್ಫ್ ಟ್ರಾನ್ಸಫರ್ ಸೇರಿದಂತೆ ವ್ಯಕ್ತಿಗತ ಹಣ ಪಾವತಿ ವಿಚಾರಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎನ್ನಲಾಗಿದೆ.
ತಿಂಗಳಿಗೆ ಯುಪಿಐ ಮೂಲಕ 1 ಲಕ್ಷದವರೆಗೆ ಗಳಿಕೆ ಕಾಣುವ ಸಣ್ಣ ವ್ಯಾಪಾರಿಗಳ ಮೇಲೆ ಎಂಡಿಆರ್ ಹೊರೆ ಇರುವುದಿಲ್ಲ ಎಂದು ಹೇಳಲಾಗಿದೆ.
'ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿಯ ನಂತರ ಯುಪಿಐ ಪಾವತಿಗಳ ಮೇಲೆ ವಿಧಿಸುವ ಶುಲ್ಕ ನಿಯಮವನ್ನು ತಕ್ಷಣವೇ ಜಾರಿಗೆ ತರಲಾಗುವುದು. ವ್ಯಾಪಾರಿಗಳ ಮನವಿಯನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿ ಇಂದು ಅ.13ರಂದು ನಿರ್ಧರಿಸಿದೆ' ಎಂದು NPCI ಎಕ್ಸ್ನಲ್ಲಿ ಬರೆದುಕೊಂಡಿದೆ. ಜೊತೆಗೆ 'ಕಾರ್ಯರೂಪಕ್ಕೆ ತರುವ ಹೊಸ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು' ಎಂದು ಹೇಳಿದೆ, (ಏಜೆನ್ಸೀಸ್).