ಯುಪಿಯಲ್ಲಿ ಮಹಿಳಾ ಮತದಾರರು ಯಾರ ಪರ? ಗೆಲುವು ಯಾರಿಗೆ? ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೊರಬಿತ್ತು ಅಚ್ಚರಿ ಸಂಗತಿ! UP Election Survey

ಮಹಿಳಾ ಮತ್ತು ಪುರುಷ ಮತದಾರರ ಆಯ್ಕೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವುದು ಈ ಸಮೀಕ್ಷೆಯ ಪ್ರಮುಖ ವಿಶೇಷವಾಗಿದೆ. ಮಹಿಳಾ ಮತದಾರರಲ್ಲಿ ಶೇ. 46.18ರಷ್ಟು ಮಂದಿ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಬೆಂಬಲಿಸಿದರೆ, ಶೇ. 31.51ರಷ್ಟು ಮಹಿಳೆಯರು ಸಮಾಜವಾದಿ ಪಕ್ಷದ ಪರವಾಗಿದ್ದಾರೆ.
UP Election Survey
ಯುಪಿಯಲ್ಲಿ ಮಹಿಳಾ ಮತದಾರರು ಯಾರ ಪರ? ಗೆಲುವು ಯಾರಿಗೆ? ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೊರಬಿತ್ತು ಅಚ್ಚರಿ ಸಂಗತಿ!
Published on: 

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ರಾಜ್ಯದಲ್ಲಿ ರಾಜಕೀಯ ವಾತಾವರಣ ಕಾವೇರಿದೆ. ಇದರ ಬೆನ್ನಲ್ಲೇ ಹೊಸ ಚುನಾವಣಾ ಪೂರ್ವ ಸಮೀಕ್ಷೆಯೊಂದು ( UP Election Survey ) ಮಹಿಳಾ ಮತದಾರರು ಹಾಗೂ ಯಾದವೇತರ ಒಬಿಸಿ (Non-Yadav OBC) ಮತಗಳು ಯಾರ ಪಾಲಾಗಲಿವೆ ಎಂಬ ಕುತೂಹಲಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ಸಮೀಕ್ಷಾ ಸಂಸ್ಥೆಯಾದ 'ಸ್ಕೋರ್ ಇಂಟೆಲಿಜೆನ್ಸ್' (Score Intelligence) ಬಿಡುಗಡೆ ಮಾಡಿರುವ ಹೊಸ ಅಭಿಪ್ರಾಯ ಸಂಗ್ರಹದ ಪ್ರಕಾರ, ಉತ್ತರ ಪ್ರದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಯಾದವೇತರ ಒಬಿಸಿ ಮತದಾರರು ಆಡಳಿತಾರೂಢ ಬಿಜೆಪಿ ಮತ್ತು ಅದರ ಎನ್‌ಡಿಎ (NDA) ಮಿತ್ರಪಕ್ಷಗಳ ಪರವಾಗಿ ಒಲವು ತೋರಿದ್ದಾರೆ. ಸಮೀಕ್ಷೆಯ ಅನ್ವಯ, ಶೇ. 55.26ರಷ್ಟು ಯಾದವೇತರ ಒಬಿಸಿ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಮತ ನೀಡುವ ಸಾಧ್ಯತೆಯಿದ್ದರೆ, ಸಮಾಜವಾದಿ ಪಕ್ಷಕ್ಕೆ (SP) ಕೇವಲ ಶೇ. 29.30ರಷ್ಟು ಮತಗಳು ಮಾತ್ರ ಲಭಿಸಲಿವೆ. ಇನ್ನುಳಿದಂತೆ ಬಹುಜನ ಸಮಾಜ ಪಕ್ಷಕ್ಕೆ (BSP) ಶೇ. 7.23 ಮತ್ತು ಕಾಂಗ್ರೆಸ್‌ಗೆ ಶೇ. 6.09ರಷ್ಟು ಯಾದವೇತರ ಒಬಿಸಿ ಮತಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಮಹಿಳಾ ಮತ್ತು ಪುರುಷ ಮತದಾರರ ಆಯ್ಕೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವುದು ಈ ಸಮೀಕ್ಷೆಯ ಪ್ರಮುಖ ವಿಶೇಷವಾಗಿದೆ. ಮಹಿಳಾ ಮತದಾರರಲ್ಲಿ ಶೇ. 46.18ರಷ್ಟು ಮಂದಿ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಬೆಂಬಲಿಸಿದರೆ, ಶೇ. 31.51ರಷ್ಟು ಮಹಿಳೆಯರು ಸಮಾಜವಾದಿ ಪಕ್ಷದ ಪರವಾಗಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಶೇ. 12.33 ಹಾಗೂ ಕಾಂಗ್ರೆಸ್‌ಗೆ ಶೇ. 7.26ರಷ್ಟು ಮಹಿಳಾ ಮತಗಳು ಬೀಳುವ ನಿರೀಕ್ಷೆಯಿದೆ.

Also Read
"ಆಶಾ ಕಾರ್ಯಕರ್ತೆಯರ ಅಗತ್ಯವಿಲ್ಲ": ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ; ಯು.ಟಿ. ಖಾದರ್​ ಸ್ಪಷ್ಟನೆ! UT Khader
UP Election Survey

ಇದಕ್ಕೆ ತದ್ವಿರುದ್ಧವಾಗಿ, ಪುರುಷ ಮತದಾರರಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದ್ದು, ಶೇ. 41.94ರಷ್ಟು ಪುರುಷರು ಎಸ್‌ಪಿಗೆ ಹಾಗೂ ಶೇ. 35.11ರಷ್ಟು ಪುರುಷರು ಬಿಜೆಪಿ ಮೈತ್ರಿಕೂಟಕ್ಕೆ ಮತ ಹಾಕುವ ಒಲವು ತೋರಿದ್ದಾರೆ. ಉಳಿದಂತೆ ಬಿಎಸ್‌ಪಿಗೆ ಶೇ. 10.65 ಮತ್ತು ಕಾಂಗ್ರೆಸ್‌ಗೆ ಶೇ. 8.04ರಷ್ಟು ಪುರುಷ ಮತಗಳು ಲಭಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಇತ್ತ ವಿಪಕ್ಷಗಳ ಪಾಳಯದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಗ್ಗಜಗ್ಗಾಟ ಮುಂದುವರಿದಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರಂಕಿಯ (100ಕ್ಕೂ ಹೆಚ್ಚು) ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸದ್ಯಕ್ಕೆ ಕೇವಲ 26 ಸ್ಥಾನಗಳನ್ನು ನೀಡಲು ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಉಭಯ ಪಕ್ಷಗಳ ನಡುವೆ ಅಸಮಾಧಾನ ಭುಗಿಲೆದ್ದಿದ್ದು, ಹಲವು ನಾಯಕರು ಏಕಾಂಗಿಯಾಗಿ ಸ್ಪರ್ಧಿಸುವ ಮಾತನಾಡುತ್ತಿದ್ದಾರೆ; ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಒಗ್ಗಟ್ಟು ಕಂಡುಬರುತ್ತಿದೆ.

ಒಟ್ಟು 403 ಸ್ಥಾನಗಳ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 202 ಸ್ಥಾನಗಳ ಬಹುಮತ ಅಗತ್ಯವಿದ್ದು, ಸಮೀಕ್ಷೆಯ ಪ್ರಕಾರ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದರೆ ಬಿಜೆಪಿ 177 ರಿಂದ 215 ಸ್ಥಾನಗಳನ್ನು ಮತ್ತು ಸಮಾಜವಾದಿ ಪಕ್ಷ 160 ರಿಂದ 202 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇನ್ನುಳಿದಂತೆ ಆರ್‌ಎಲ್‌ಡಿ (RLD) 10, ಅಪ್ನಾ ದಳ (ಎಸ್) 5, ಸುಭಾಸ್ಪಾ (SBSP) 3 ರಿಂದ 5, ನಿಷಾದ್ ಪಕ್ಷ 1 ರಿಂದ 3 ಹಾಗೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಕೇವಲ 2 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

Also Read
ಕೇಜ್ರಿವಾಲ್ 'ಶೀಷ್ ಮಹಲ್' ರಾಜ ವೈಭೋಗ: ಶ್ರೀರಾಮನ ಪಕ್ಕದಲ್ಲಿ ಜೀಸಸ್ ಫೋಟೋ ಕಂಡು ಭುಗಿಲೆದ್ದ ವಿವಾದ! Sheesh Mahal
UP Election Survey

ಒಂದು ವೇಳೆ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ 174 ರಿಂದ 219 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದ್ದು, ಎನ್‌ಡಿಎ ಮೈತ್ರಿಕೂಟವು 181 ರಿಂದ 226 ಸ್ಥಾನಗಳನ್ನು ಹಾಗೂ ಬಿಎಸ್‌ಪಿ ಕೇವಲ 1 ಸ್ಥಾನವನ್ನು ಪಡೆಯಬಹುದು ಎಂದು ಸ್ಕೋರ್ ಇಂಟೆಲಿಜೆನ್ಸ್ ಸಮೀಕ್ಷೆ ಭವಿಷ್ಯ ನುಡಿದಿದೆ, (ಏಜೆನ್ಸೀಸ್​).